RSS  
ನ್ಯೂಸ್

RSS ಮುಖ್ಯಸ್ಥರಿಗೆ ಪ್ರಿಯಾಂಕ್ ಖರ್ಗೆ ಪತ್ರ: 100 ವರ್ಷ ಪೂರೈಸಿದಕ್ಕೆ ಅಭಿನಂದನೆ ಹೇಳಿ, 8 ಪ್ರಶ್ನೆಗಳು ಮುಂದಿಟ್ಟ ಸಚಿವ!

ಬೆಂಗಳೂರು: RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100ನೇ ವರ್ಷದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ, ರಾಜ್ಯ ಸರ್ಕಾರದ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಸಂಘದ ಕಾನೂನುಬದ್ಧ ಸ್ಥಾನಮಾನ, ಹಣಕಾಸು ವ್ಯವಹಾರಗಳು, ತೆರಿಗೆ ಪಾವತಿ ಹಾಗೂ ಸಾರ್ವಜನಿಕ ಚಟುವಟಿಕೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಮನವಿ ಮಾಡಿದ್ದಾರೆ.
ಜೂ.13ರಂದು ಬರೆದಿರುವ ಈ ಪತ್ರದ ಪ್ರತಿಯನ್ನು ಪ್ರಿಯಾಂಕ್ ಖರ್ಗೆ ಇಂದು(ಜೂ.15) ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, “ನನ್ನ ಪತ್ರ ಶೀಘ್ರದಲ್ಲೇ ನಿಮ್ಮನ್ನು ತಲುಪಲಿದೆ. ಆದರೆ ಈ ವಿಷಯದ ಬಗ್ಗೆ ಮೊದಲೇ ಗಮನ ಸೆಳೆಯುವುದು ಅಗತ್ಯ ಎಂದು ಭಾವಿಸಿದ್ದೇನೆ” ಎಂದು ಹೇಳಿದ್ದಾರೆ.

ಮೊದಲು ಅಭಿನಂದನೆ

ಪತ್ರದ ಆರಂಭದಲ್ಲೇ ಆರ್‌ಎಸ್‌ಎಸ್‌ 100 ವರ್ಷ ಪೂರೈಸಿರುವುದಕ್ಕೆ ಪ್ರಿಯಾಂಕ್ ಖರ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ದೇಶದಾದ್ಯಂತ 60 ಸಾವಿರಕ್ಕೂ ಹೆಚ್ಚು ಶಾಖೆಗಳು ಮತ್ತು ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವ ಸಂಘಟನೆ ಎಂದು ಆರ್‌ಎಸ್‌ಎಸ್‌ ಹೇಳಿಕೊಳ್ಳುತ್ತದೆ. ಇಂತಹ ದೊಡ್ಡ ಸಂಘಟನೆ ಸಮಾಜ ಮತ್ತು ಸಾರ್ವಜನಿಕ ಜೀವನದಲ್ಲಿ ಮಹತ್ವದ ಪ್ರಭಾವ ಹೊಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಆದರೆ, ಇದೇ ಕಾರಣಕ್ಕೆ ಆರ್‌ಎಸ್‌ಎಸ್‌ ಅತ್ಯುನ್ನತ ಮಟ್ಟದ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಂವಿಧಾನಬದ್ಧ ನಿಯಮಗಳನ್ನು ಪಾಲಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲೇ ಸಾವಿರಾರು ಶಾಖೆಗಳು
ಆರ್‌ಎಸ್‌ಎಸ್‌ನ ಉನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾಗಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯ 2025–26ರ ವರದಿಯನ್ನು ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ, ಕರ್ನಾಟಕದಲ್ಲಿ ಸಂಘದ ವ್ಯಾಪ್ತಿ ದೊಡ್ಡ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ.
ವರದಿ ಪ್ರಕಾರ ರಾಜ್ಯದಲ್ಲಿ 4,127 ದೈನಂದಿನ ಶಾಖೆಗಳು,1,389 ವಾರಾಂತ್ಯ ಮಿಲನಗಳು,60 ಮಾಸಿಕ ಮಂಡಳಿಗಳು,2,194 ಸಮಾಜೋತ್ಸವಗಳು,19.61 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರು,562 ಪಥಸಂಚಲನಗಳು,2.21 ಲಕ್ಷಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂಸೇವಕರ ಭಾಗವಹಿಸುವಿಕೆ ಇಷ್ಟೊಂದು ದೊಡ್ಡ ಮಟ್ಟದ ಸಂಘಟನಾ ಜಾಲ ಹೊಂದಿರುವ ಸಂಸ್ಥೆಯನ್ನು ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.

ಯಾವ ಪ್ರಶ್ನೆಗಳನ್ನು ಕೇಳಿದ್ದಾರೆ?

ಆರ್‌ಎಸ್‌ಎಸ್‌ ತನ್ನ ಕಾನೂನುಬದ್ಧ ಸ್ಥಾನಮಾನ ಮತ್ತು ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.
ಸಂಘದ ಕಾನೂನುಬದ್ಧ ಸ್ಥಾನಮಾನ ಏನು?
ಸಂಘಟನೆಯ ರಚನೆ ಮತ್ತು ಜವಾಬ್ದಾರಿ ಹೊಂದಿರುವ ಅಧಿಕಾರಿಗಳು ಯಾರು?
ದೇಣಿಗೆ ಮತ್ತು ಇತರ ಆದಾಯದ ಮೂಲಗಳು ಯಾವುವು?
ವೆಚ್ಚ ಮತ್ತು ಆಸ್ತಿಗಳ ವಿವರವೇನು?
ಅನ್ವಯವಾಗುವ ತೆರಿಗೆಗಳನ್ನು ಪಾವತಿಸಲಾಗುತ್ತಿದೆಯೇ?
ಯಾವುದೇ ಅಧಿಕೃತ ನೋಂದಣಿ ಇಲ್ಲದೆ ಚಟುವಟಿಕೆ ನಡೆಸಲು ಇರುವ ಕಾನೂನು ಆಧಾರವೇನು?
ಸಾರ್ವಜನಿಕ ಕಾರ್ಯಕ್ರಮಗಳಿಗೆ ಪಡೆಯುವ ಅನುಮತಿಗಳ ವಿವರ ಏನು?
ದೊಡ್ಡ ಪ್ರಮಾಣದ ಪಥಸಂಚಲನ ಮತ್ತು ಸಭೆಗಳಿಗೆ ಅನುಸರಿಸುವ ನಿಯಮಗಳು ಯಾವುವು? ಈ ಎಲ್ಲ ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಅವರು ಮನವಿ ಮಾಡಿದ್ದಾರೆ.

‘ಕಾನೂನಿಗೆ ಎಲ್ಲರೂ ಸಮಾನ’

ಪತ್ರದಲ್ಲಿ ಪ್ರಿಯಾಂಕ್ ಖರ್ಗೆ ಅವರು, ಭಾರತದಲ್ಲಿ ಯಾವುದೇ ಸಂಘಟನೆ ಕಾನೂನಿಗಿಂತ ಮೇಲಲ್ಲ ಎಂದು ಹೇಳಿದ್ದಾರೆ. ಸಣ್ಣ ಸಂಘಟನೆಗಳು, ಎನ್‌ಜಿಒಗಳು, ಟ್ರಸ್ಟ್‌ಗಳು, ಧಾರ್ಮಿಕ ಸಂಸ್ಥೆಗಳು, ಕಂಪನಿಗಳು ಹಾಗೂ ಸಾಮಾನ್ಯ ನಾಗರಿಕರು ಸಹ ನೋಂದಣಿ ಮಾಡಿಕೊಳ್ಳಬೇಕು, ಲೆಕ್ಕಪತ್ರಗಳನ್ನು ನಿರ್ವಹಿಸಬೇಕು ಹಾಗೂ ಅಗತ್ಯವಿದ್ದರೆ ತೆರಿಗೆ ಪಾವತಿಸಬೇಕು. ಹಾಗಿದ್ದರೆ ಆರ್‌ಎಸ್‌ಎಸ್‌ ಕೂಡ ಅದೇ ಮಾನದಂಡಗಳನ್ನು ಪಾಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರಭಕ್ತಿ, ಶಿಸ್ತು ಮತ್ತು ಕರ್ತವ್ಯದ ಬಗ್ಗೆ ಮಾತನಾಡುವ ಸಂಘಟನೆ ತನ್ನ ಕಾರ್ಯಚಟುವಟಿಕೆಗಳಲ್ಲೂ ಪಾರದರ್ಶಕತೆ ಮತ್ತು ಕಾನೂನು ಪಾಲನೆಯನ್ನು ತೋರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶತಮಾನೋತ್ಸವದಲ್ಲೇ ನೋಂದಣಿಗೆ ಸಲಹೆ

ಆರ್‌ಎಸ್‌ಎಸ್‌ ತನ್ನ 100ನೇ ವರ್ಷವನ್ನು ಕೇವಲ ಸಂಭ್ರಮದ ಕಾರ್ಯಕ್ರಮವಾಗಿ ಆಚರಿಸುವ ಬದಲು ಆತ್ಮಾವಲೋಕನಕ್ಕೆ ಬಳಸಿಕೊಳ್ಳಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಂಘಟನೆಯು ಕಾನೂನುಬದ್ಧವಾಗಿ ನೋಂದಣಿ ಮಾಡಿಕೊಳ್ಳಬೇಕು, ಹಣಕಾಸು ವಿವರಗಳನ್ನು ಬಹಿರಂಗಪಡಿಸಬೇಕು, ಅನ್ವಯವಾಗುವ ತೆರಿಗೆಗಳನ್ನು ಪಾವತಿಸಬೇಕು ಮತ್ತು ಭಾರತದ ಸಂವಿಧಾನದ ಚೌಕಟ್ಟಿನೊಳಗೆ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಉತ್ತರದ ನಿರೀಕ್ಷೆಯಲ್ಲಿ ಸಚಿವ

ಪತ್ರದ ಕೊನೆಯಲ್ಲಿ, ಈ ವಿಷಯಗಳ ಕುರಿತು ಆರ್‌ಎಸ್‌ಎಸ್‌ನ ಅಧಿಕೃತ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿರುವುದಾಗಿ  ಖರ್ಗೆ ತಿಳಿಸಿದ್ದಾರೆ. ಜೊತೆಗೆ, ಸಂಘದ ಅಧಿಕಾರಿಗಳು ಈ ವಿಚಾರದ ಬಗ್ಗೆ ಚರ್ಚಿಸಲು ಮುಂದೆ ಬರಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಪತ್ರ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಆರ್‌ಎಸ್‌ಎಸ್‌ ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.