ಹೈದರಾಬಾದ್: ಡೇಟಿಂಗ್ ಆ್ಯಪ್ ಮೂಲಕ ಅವಿವಾಹಿತ ಪುರುಷರನ್ನು ಟಾರ್ಗೆಟ್ ಮಾಡಿ ಮದುವೆ ಹಾಗೂ ಡೇಟಿಂಗ್ ಹೆಸರಲ್ಲಿ ವಂಚನೆ ಮಾಡುತ್ತಿದ್ದ ಖತರ್ನಾಕ್ ದಂಪತಿಯನ್ನು ಹೈದರಾಬಾದ್ನ ರಾಚಕೊಂಡ ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬನಿಗೆ 21 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ ದಂಪತಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಕಂಪಾ ಹರಿದಯಾನಂದ (30) ಮತ್ತು ಅನುಷಾ ಅಲಿಯಾಸ್ ಹರಿಕಾ (20) ಎಂದು ಗುರುತಿಸಲಾಗಿದೆ. ಇಬ್ಬರು ಸಹ ವಿಜಯವಾಡ ಮೂಲದವರು. 2017ರಲ್ಲಿ ಮದುವೆಯಾಗಿದ್ದಾರೆ. ಇದಕ್ಕೂ ಮುನ್ನವೇ ಅನುಷಾ ಮದುವೆಯಾಗಿ ಡಿವೋರ್ಸ್ ಪಡೆದುಕೊಂಡಿದ್ದಳು. ಎರಡನೇ ಬಾರಿಗೆ ಹರಿದಯಾನಂದನನ್ನು ಮದುವೆಯಾಗಿದ್ದಾಳೆ.
ಹರಿದಯಾನಂದ್ ಆರೋಗ್ಯ ಹದಗೆಡುತ್ತಿರುವುದರಿಂದ ಕುಟುಂಬ ಸಂಕಷ್ಟಕ್ಕೀಡಾಗಿರುವ ಸಮಯದಲ್ಲೇ ಅನುಷಾಗೆ ಹೈದರಾಬಾದ್ನ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ಕೆಲಸಕ್ಕೆ ಸಿಕ್ಕಿತ್ತು. ಆದರೂ ಸಂಬಳ ಸಾಕಾಗದೇ ಹೆಚ್ಚಿನ ಆದಾಯಕ್ಕಾಗಿ ಬೇರೆ ದಾರಿಯನ್ನು ದಂಪತಿ ಹುಡುಕುತ್ತಿದ್ದರು. ಹೀಗಿರುವಾಗ ದಂಪತಿಯ ತಲೆಗೆ ಖತರ್ನಾಕ್ ಐಡಿಯಾ ಒಂದು ಹೊಳೆದಿದೆ. ತಕ್ಷಣ ಡೇಟಿಂಗ್ ಆ್ಯಪ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ಅವಿವಾಹಿತ ಪುರುಷರನ್ನು ಟಾರ್ಗೆಟ್ ಮಾಡಲು ಆರಂಭಿಸಿದರು.
ಅಂದಹಾಗೆ ದಂಪತಿ ಹರಿಕಾ ಹರಿಯಾನಂದ್ ಹೆಸರಿನಲ್ಲಿ ಇಂಡಿಯನ್ಡೇಟಿಂಗ್.ಕಾಮ್ (IndianDating.com) ಆ್ಯಪ್ನಲ್ಲಿ ನಕಲಿ ಖಾತೆ ತೆರೆದಿದ್ದರು. ಅಂತರ್ಜಾಲದಲ್ಲಿ ಬ್ಯೂಟಿಫುಲ್ ಹುಡುಗಿಯ ಫೋಟೋ ಡೌನ್ಲೋಡ್ ಮಾಡಿಕೊಂಡು ಪ್ರೋಫೈಲ್ಗೆ ಅಪ್ಲೋಡ್ ಮಾಡಿದ್ದರು. ಹುಡುಗಿ ಫೋಟೋ ನೋಡಿ ಮರುಳಾಗಿ ಮಸೇಜ್ ಮಾಡುತ್ತಿದ್ದ ಅವಿವಾಹಿತ ಪುರುಷರ ಜತೆ ಹರಿಯಾನಂದ್ ಹೆಣ್ಣಿನ ಹೆಸರಲ್ಲಿ ಚಾಟ್ ಮಾಡುತ್ತಿದ್ದ. ಅದರಲ್ಲೂ ಶ್ರೀಮಂತರು ಮತ್ತು ಮಹಿಳೆಯರ ಮೋಹವಿರುವ ಪುರುಷರೇ ಅವರ ಟಾರ್ಗೆಟ್ ಆಗಿದ್ದರು.
ಹೀಗಿರುವಾಗ ಹೈದರಾಬಾದ್ನ ನಾರದಪೇಟ್ ಮೂಲದ ವ್ಯಕ್ತಿಯೊಬ್ಬ ಡೇಟಿಂಗ್ ಆ್ಯಪ್ನಲ್ಲಿ ಪರಿಚಿತನಾಗುತ್ತಾನೆ. ರೋಸಾರಿಯೋ ಹೆಸರಿನಲ್ಲಿ ಚಾಟ್ ಮಾಡುತ್ತಿದ್ದ ಹರಿಯಾನಂದ ಬೆಣ್ಣೆಯಂತಹ ಮಾತುಗಳನ್ನಾಡಿ ಹುಡುಗಿ ಒಳ್ಳೆಯವಳು ಎಂದು ನಂಬುವಂತೆ ಮಾಡುತ್ತಾನೆ. ಇಬ್ಬರ ನಡುವಿನ ಸ್ನೇಹ ನಂಬಿಕೆಗೆ ತಿರುಗಿದಾಗ ತನ್ನ ತಾಯಿಯ ಆರೋಗ್ಯ ಸರಿಯಿಲ್ಲ. ಹೃಯದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಪರೇಷನ್ ಮಾಡಿಸಬೇಕೆಂದು ಹೇಳಿ ಹಣದ ನೆರವು ಕೇಳುತ್ತಾನೆ. ಅದನ್ನು ನಂಬಿ ಡೊನಾಲ್ಡ್ ಹಣವನ್ನು ಕಳುಹಿಸುತ್ತಾನೆ.
ಬಳಿಕ ತನ್ನ ತಾಯಿ ತೀರಿ ಹೋದಳು ಎಂದು ಹೇಳಿ ಮತ್ತಷ್ಟು ಹಣವನ್ನು ಕೇಳಿ ಪಡೆದುಕೊಳ್ಳುತ್ತಾರೆ. ಹೀಗೆ ಸುಮಾರು 21 ಲಕ್ಷ ರೂ. ಹಣವನ್ನು ಡೊನಾಲ್ಡ್ ಎಂಬುವರಿಂದ ಖತರ್ನಾಕ್ ದಂಪತಿ ಪಡೆದುಕೊಂಡಿರುತ್ತಾರೆ. ಇದರ ನಡುವೆ ಹಣ ನೀಡಿದ ವ್ಯಕ್ತಿ ಮದುವೆ ಬಗ್ಗೆ ಅನೇಕ ಬಾರಿ ಪ್ರಸ್ತಾಪ ಮಾಡಿದಾಗಲೆಲ್ಲ ನಡುವೆ ಏನಾದರೂ ಬೇರೆ ವಿಚಾರ ಮಾತನಾಡಿ ವಿಷಯಾಂತರ ಮಾಡುತ್ತಿದ್ದರು.
ಮದುವೆಯನ್ನು ಮುಂದೂಡುತ್ತಾ ಹಣದ ನೆರವು ಕೇಳುವುದನ್ನು ಮುಂದುವರಿಸುವುದನ್ನು ನೋಡಿ ಅನುಮಾನಗೊಂಡ ಡೊನಾಲ್ಡ್, ರಾಚಕೊಂಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಬಳಿಕ ಪ್ರಕರಣ ಬೆನ್ನತ್ತಿದ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಡೊನಾಲ್ಡ್ ದೂರು ನೀಡಿರುವುದನ್ನು ತಿಳಿದು ದಂಪತಿ ಹೈದರಾಬಾದ್ನಿಂದ ವಿಜಯವಾಡಕ್ಕೆ ಪರಾರಿಯಾಗಿದ್ದರು. ಸದ್ಯ ಬಂಧಿಯಾಗಿರುವ ದಂಪತಿ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಾರೆ. (ಏಜೆನ್ಸೀಸ್)