ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಗ್ಯಾಂಗ್ವಾರ್ ಶುರುವಾಗಿದ್ದು, ನಡುರಸ್ತೆಯಲ್ಲೇ ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ನಗರದ ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚೆಂದು ಕೊಲೆಯಾದ ವ್ಯಕ್ತಿ. ಈತ ಮಾಜಿ ನಗರ ಪಾಲಿಕೆ ಸದಸ್ಯ ಅವ್ವ ಮಾದೇಶ್ ಆಪ್ತ. ದ್ವಿಚಕ್ರ ವಾಹನದಲ್ಲಿ ಬಂದ 6 ಜನ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಯಾದ ಚಂದ್ರಶೇಖರ್ ಹುಣಸೂರು ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕಳೆದ ಕೆಲ ದಿನಗಳಿಂದಷ್ಟೇ ಪ್ರಕರಣದಲ್ಲಿ ಖುಲಾಸೆಯಾಗಿ ಜೈಲಿನಿಂದ ಹೊರ ಬಂದಿದ್ದ. ಪಡುವಾರಳ್ಳಿಯ ದೇವು ಕೊಲೆಗೆ ಪ್ರತೀಕಾರವಾಗಿ ಚಂದ್ರಶೇಖರ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಬರ್ಬರ ಹತ್ಯೆಯಿಂದಾಗಿ ಒಂಟಿಕೊಪ್ಪಲಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್)