More

    ವಸತಿ ನಿಲಯ ಹೆಚ್ಚಳಕ್ಕಿಲ್ಲ ಆಸಕ್ತಿ, ಅಧಿಕವಿದೆ ವಿದ್ಯಾರ್ಥಿಗಳ ಸಂಖ್ಯೆ

    ಅಶೋಕ ಬೆನ್ನೂರು ಸಿಂಧನೂರು
    ಮೇ ಹಾಗೂ ಜೂನ್‌ನಲ್ಲಿ ಶಾಲೆ-ಕಾಲೇಜ್‌ಗಳು ಆರಂಭಗೊಂಡಿದ್ದು ಪ್ರವೇಶಾತಿಗಳು ಭರದಿಂದ ಸಾಗಿವೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಸತಿ ನಿಲಯಗಳಿಲ್ಲದಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಕಷ್ಟವಾಗಿದೆ. ಸರ್ಕಾರ ವಸತಿ ನಿಲಯಗಳ ಹೆಚ್ಚಳಕ್ಕೆ ಆಸಕ್ತಿ ತೋರಿಸುತ್ತಿಲ್ಲ.

    ಇದನ್ನೂ ಓದಿ: ವಸತಿ ನಿಲಯ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸಿ

    ಕಳೆದೆರಡು ವರ್ಷಗಳಿಂದ ಕೋವಿಡ್ ಇದ್ದ ಪರಿಣಾಮ ತಾಲೂಕಿನಾದ್ಯಂತ ಶೇ.30 ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರ ವಿದ್ಯಾರ್ಥಿಗಳು ನಿಲಯಗಳು ಖಾಲಿ ಇದ್ದವು. ಬಹುತೇಕ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ದಾಖಲಾಗಿದ್ದರೂ ಕರೊನಾ ಸೋಂಕಿನ ಭಯದ ಹಿನ್ನೆಲೆಯಲ್ಲಿ ಮನೆ ಸೇರಿದ್ದರು. ಆದರೆ, ಈ ಬಾರಿ ಈಗಾಗಲೇ ಶಾಲೆಗಳು ಆರಂಭಗೊಂಡಿದ್ದು, ಮಕ್ಕಳು ವಸತಿ ನಿಲಯಗಳತ್ತ ಹೆಜ್ಜೆ ಇಡುತ್ತಿದ್ದಾರೆ.

    ತಾಲೂಕಿನಲ್ಲಿ ಮೆಟ್ರಿಕ್ ಪೂರ್ವ ಹಾಗೂ ನಂತರ ವಿದ್ಯಾರ್ಥಿ ನಿಲಯಗಳು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿವೆ. ಒಟ್ಟು 08 ವಸತಿ ನಿಲಯಗಳು ಈ ಇಲಾಖೆಯ ವ್ಯಾಪ್ತಿಯಲ್ಲಿವೆ. ಅವುಗಳಲ್ಲಿ 03 ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯ, 01 ಬಾಲಕಿಯರ, ನಂತರ ಬಾಲಕರು-02, ಬಾಲಕಿಯರ 02 ವಸತಿ ನಿಲಯಗಳಿವೆ.

    ಒಟ್ಟು 685 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅವಕಾಶವಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 06 ಮೆಟ್ರಿಕ್ ಪೂರ್ವ ವಸತಿ ನಿಲಯ ಹಾಗೂ ಮೆಟ್ರಿಕ್ ನಂತರ 5 ವಸತಿ ನಿಲಯಗಳಿದ್ದು ಒಟ್ಟು 1020 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಅವಕಾಶವಿದೆ. ಈಗಾಗಲೇ ವಸತಿ ನಿಲಯಗಳಲ್ಲಿ ದಾಖಲಾತಿ ಆರಂಭಗೊಂಡಿದೆ.

    ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ದಾಖಲಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅವಶ್ಯಕತೆಯಿದೆ. ಜತೆಗೆ ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

    ಶಾಲೆ ಆಯ್ಕೆಗೆ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಆದರೆ ಮೆಟ್ರಿಕ್ ಪೂರ್ವ ವಸತಿ ನಿಲಯಗಳ ದಾಖಲಾತಿಗಾಗಿ ಯಾವುದೇ ಪರೀಕ್ಷೆ ಇರುವದಿಲ್ಲ. ನೇರವಾಗಿ ಆಯಾ ಹಾಸ್ಟೆಲ್ ವಾರ್ಡ್‌ನಗಳಲ್ಲಿ ಅರ್ಜಿ ಪಡೆದು ಸಲ್ಲಿಕೆ ಮಾಡಬಹುದು. ಈಗಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡವಿಲ್ಲ.

    ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ. ಕಿರಿದಾದ ಜಾಗದಲ್ಲಿ ವಿದ್ಯಾರ್ಥಿಗಳು ವೇದನೆ ಪಡುವಂತಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯ ಸೇರಲು ಉತ್ಸುಕರಾಗಿದ್ದಾರೆ. ಆದರೆ, ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿರುವುದರಿಂದ ಪಾಲಕರು ನಿರಾಸಕ್ತಿ ವಹಿಸುತ್ತಿದ್ದಾರೆ.

    ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿಲ್ಲ ವಸತಿ ನಿಲಯಗಳಿಲ್ಲ. ನಿಗದಿಪಡಿಸಿರುವ ಸಂಖ್ಯೆ ಜತೆಗೆ ಹೆಚ್ಚುವರಿ ಸಂಖ್ಯೆ ವಿದ್ಯಾರ್ಥಿಗಳನ್ನು ವಸತಿ ನಿಲಯಗಳಿಗೆ ತೆಗೆದುಕೊಂಡರೂ, ಸರ್ಕಾರ ಮಾತ್ರ ಮೊದಲಿದ್ದ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾತ್ರ ಸೌಲಭ್ಯ ಒದಗಿಸುತ್ತಿರುವುದರಿಂದ ಹೆಚ್ಚುವರಿ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತಗೊಳ್ಳುವಂತಾಗಿದೆ.

    ವಸತಿ ನಿಲಯ ಮಂಜೂರಾತಿ ಕಳೆದ ಐದಾರು ವರ್ಷಗಳಿಂದ ಬೇಡಿಕೆ ಇದ್ದರೂ ಸ್ಪಂದಿಸುವ ಕೆಲಸ ಆಗಿಲ್ಲ. ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನೊಳಗೊಂಡು 30 ಕ್ಕೂ ಹೆಚ್ಚು ಪಿಯುಸಿ ಕಾಲೇಜ್‌ಗಳಿದ್ದು 20 ಪದವಿ ಕಾಲೇಜ್‌ಗಳಿವೆ. ಆದರೆ ವಸತಿ ನಿಲಯಗಳು ಮಾತ್ರ ಬೆರಳೆಣಿಕೆಯಷ್ಟಿವೆ.

    ಸಾವಿರಾರು ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯ ಬೇಕಿದೆ. ಸದ್ಯ ಎರಡ್ಮೂರು ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯ ಅವಕಾಶವಿದೆ. ಒಟ್ಟಿನಲ್ಲಿ ದೊಡ್ಡ ತಾಲೂಕಿನಲ್ಲಿ ವಸತಿ ನಿಲಯಗಳ ಸಂಖ್ಯೆ ಕಡಿಮೆ ಇದ್ದು ಹೆಚ್ಚಿಸುವ ಕೆಲಸ ಸರ್ಕಾರ ಮಾಡಬೇಕಿದೆ.

    ತಾಲೂಕಿನಲ್ಲಿ ಮೆಟ್ರಿಕ್ ಪೂರ್ವ ಹಾಗೂ ನಂತರ ವಿದ್ಯಾರ್ಥಿ ನಿಲಯಗಳು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿವೆ. ಒಟ್ಟು 08 ವಸತಿ ನಿಲಯಗಳು ಈ ಇಲಾಖೆಯ ವ್ಯಾಪ್ತಿಯಲ್ಲಿವೆ. ಒಟ್ಟು 685 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಅವಕಾಶವಿದೆ.
    | ಲಿಂಗಪ್ಪ ಅಂಗಡಿ, ಬಿಸಿಎಂ ವಸತಿ ನಿಲಯ ಅಧಿಕಾರಿ, ಸಿಂಧನೂರು.

    ಸಿಂಧನೂರಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕಾಲೇಜ್‌ಗಳಿದ್ದು ವಸತಿ ನಿಲಯಗಳಿಲ್ಲ. ಇದರಿಂದ ಬೇರೆ ಕಡೆಯಿಂದ ಇಲ್ಲಿಗೆ ಅಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳು ಹೆಚ್ಚಿನ ಸಮಸ್ಯೆ ಎದುರಿಸಬೇಕಿದೆ.
    | ಶಿವಮಣಿ ಶಾಲಿಗೆನೂರು, ಪದವಿ ವಿದ್ಯಾರ್ಥಿ, ಸಿಂಧನೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts