More

    ಚಿಗುರೊಡೆದ ಏಮ್ಸ್ ಸ್ಥಾಪನೆಯ ಕನಸು- ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ

    ರಾಯಚೂರು: ಜಿಲ್ಲೆಗೆ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಮಂಜೂರು ಮಾಡಲು ಕಳೆದ ಒಂದು ವರ್ಷದಿಂದ ಹೋರಾಟ ನಡೆಸಲಾಗುತ್ತಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವುದಾಗಿ ಭರವಸೆ ನೀಡಿತ್ತು. ಈಗ ಹೋರಾಟಗಾರರಲ್ಲಿ ಆಶಾಭಾವ ಚಿಗುರೊಡೆದಿದೆ.

    ಇದನ್ನೂ ಓದಿ: ಪ್ರಣಾಳಿಕೆ ಅನುಷ್ಠಾನಕ್ಕೆ ತರಲಾಗುವುದು: ಸಂಕೇತ್ ಪೂವಯ್ಯ

    ಈ ಹಿಂದೆ ಜಿಲ್ಲೆಗೆ ಐಐಟಿ ಮಂಜೂರು ಮಾಡುವಂತೆ ಸತತ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಹೋರಾಟಕ್ಕೆ ಪ್ರತಿಯಾಗಿ ಐಐಟಿ ಮಂಜೂರು ಮಾಡುವ ಭರವಸೆ ನೀಡುವ ಮೂಲಕ ಜಿಲ್ಲೆಯ ಜನರ ಮೂಗಿಗೆ ತುಪ್ಪ ಸವರುವ ಕೆಲಸವಾಗಿತ್ತು.

    ಇದರಿಂದ ಎಚ್ಚೆತ್ತುಕೊಂಡ ಹೋರಾಟಗಾರರು ಏಮ್ಸ್ ಹೋರಾಟ ಸಮಿತಿ ರಚಿಸಿ ನಿರಂತರ ಧರಣಿಯನ್ನು ಆರಂಭಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದರು. ಹೋರಾಟಕ್ಕೆ ಎಲ್ಲ ವರ್ಗದ ಜನರ ಬೆಂಬಲ ದೊರೆತರೂ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯಲಿಲ್ಲ.

    ಹೋರಾಟದ ಕಿಚ್ಚನ್ನು ಹೆಚ್ಚಿಸಲು 10 ಸಾವಿರಕ್ಕೂ ಹೆಚ್ಚು ಜನರಿಂದ ರಕ್ತದಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಯಿತು. ನಂತರ ಸತತವಾಗಿ ಧರಣಿ ಕೈಗೊಳ್ಳಲಾಯಿತು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಜಿಲ್ಲೆಗೆ ಏಮ್ಸ್ ಮಾದರಿ ಆಸ್ಪತ್ರೆ ಮಂಜೂರು ಮಾಡಿದ್ದು, ಜಿಲ್ಲೆಗೆ ಏಮ್ಸ್ ತಪ್ಪಿಸುವ ಸುಳಿವು ಬಂದಿತ್ತು.

    ಐಐಟಿಯನ್ನು ಧಾರವಾಡಕ್ಕೆ ಸ್ಥಳಾಂತರವಾಗದಂತೆ ಏಮ್ಸ್‌ನ್ನು ಕೂಡಾ ಧಾರವಾಡಕ್ಕೆ ತೆಗೆದುಕೊಂಡು ಹೋಗುವ ಹುನ್ನಾರ ಅಲ್ಲಿನ ಪ್ರಭಾವಿ ರಾಜಕಾರಣಿ ನಡೆಸಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ನೆಪಮಾತ್ರಕ್ಕೆ ಏಮ್ಸ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಮಾಡಲಿಲ್ಲ.

    ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಏಮ್ಸ್ ಮಂಜೂರು ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದವು.

    ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಪುನಃ ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಹೀಗಾಗಿ ಹೋರಾಟಗಾರರಲ್ಲಿ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವ ಆಶಾಭಾವ ಮೂಡಿದೆ.

    ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಶಾಸಕರು ಜಯ ಸಾಧಿಸಿದ್ದು, ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಅಗತ್ಯವಿದೆ. ಜಿಲ್ಲೆಯ ಜನರಿಗೆ ನೀಡಿದ ವಾಗ್ದಾನವನ್ನು ಈಡೇರಿಸಲು ಕಾಂಗ್ರೆಸ್ ಮುಂದಾಗಬೇಕಾಗಿದೆ.

    ಕೇಂದ್ರ ಸರ್ಕಾರದ ಕಗ್ಗಂಟು

    ಕೇಂದ್ರ ಸರ್ಕಾರ ರಾಜ್ಯಕ್ಕೆ 2019ರಲ್ಲಿ ಏಮ್ಸ್ ಮಂಜೂರು ಮಾಡಿದ್ದು, ಎಲ್ಲಿ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಸರ್ಕಾರದಿಂದ ಶಿಫಾರಸು ಮಾಡಬೇಕಾಗಿದೆ. ಈ ಹಿಂದೆ ರಾಜ್ಯ-ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಾರ್ಯಕ್ಕೆ ಹಿನ್ನೆಡೆಯಾಯಿತು. ಈಗ ಕಾಂಗ್ರೆಸ್ ರಾಜ್ಯ ಸರ್ಕಾರ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಶಿಫಾರಸು ಮಾಡಿದರೂ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಅದಕ್ಕೆ ಸಮ್ಮತಿ ಸೂಚಿಸುತ್ತದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ರಾಜ್ಯ ಸರ್ಕಾರ ಶಿಫಾರಸು ಮಾಡಿದರೂ ಕೇಂದ್ರ ಸರ್ಕಾರ ಅದಕ್ಕೆ ಅಡ್ಡಗಾಲು ಹಾಕುವ ಸಾಧ್ಯತೆಗಳು ಹೆಚ್ಚಾಗಿದೆ.

    ಚುನಾವಣೆಯ ಮುನ್ನ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಪರಮೇಶ್ವರ ಅವರನ್ನು ಹೋರಾಟ ಸಮಿತಿ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತ್ತು. ಪರಿಣಾಮ ಕಾಂಗ್ರೆಸ್ ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಜಿಲ್ಲೆಗೆ ಏಮ್ಸ್ ಮಂಜೂರಾಗುವ ಭರವಸೆ ಮೂಡಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪುನಃ ಹೋರಾಟ ಸಮಿತಿ ನಿಯೋಗ ತೆರಳಿ ಸಿದ್ದರಾಮಯ್ಯಗೆ ಭರವಸೆ ಈಡೇರಿಸುವಂತೆ ಮನವಿ ಮಾಡಲಿದೆ.
    | ಡಾ.ಬಸವರಾಜ ಕಳಸ, ಪ್ರಧಾನ ಸಂಚಾಲಕ, ಏಮ್ಸ್ ಹೋರಾಟ ಸಮಿತಿ, ರಾಯಚೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts