More

    ಪ್ರಣಾಳಿಕೆ ಅನುಷ್ಠಾನಕ್ಕೆ ತರಲಾಗುವುದು: ಸಂಕೇತ್ ಪೂವಯ್ಯ

    ಮಡಿಕೇರಿ:

    ಕಾಂಗ್ರೆಸ್ ವತಿಯಿಂದ ವಿರಾಜಪೇಟೆ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ತಿಳಿಸಿದರು. ಪ್ರಣಾಳಿಕೆಯಲ್ಲಿ ಇರುವ ಅಂಶಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಮಿತಿಯೊಂದನ್ನು ರಚಿಸಲಾಗುವುದು. ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ಕಿತ್ತೊಗೆದು ವಿರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತ ಕ್ಷೇತ್ರವಾಗಿ ರಾಜ್ಯದಲ್ಲೇ ಮಾದರಿ ಕ್ಷೇತ್ರ ಮಾಡಲಾಗುವುದು ಎಂದು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಒಂದು ರಾಜಕೀಯ ಪಕ್ಷವಾಗಿ ನಮಗೆ ಉತ್ತಮ ಸಮಾಜ ನಿರ್ಮಾಣವೂ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರನ ಸಮಸ್ಯೆಗೆ ವೈಜ್ಞಾನಿಕವಾಗಿ ಪರಿಹಾರ, ಶ್ರಮಿಕರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ರಮಗಳು,. ಮೂಲಭೂತ ಸೌಕರ್ಯ ಒದಗಿಸುವುದು, ವನ್ಯಜೀವಿ, ಮಾನವ ಸಂರ್ಘಕ್ಕೆ ಶಾಶ್ವತ ಪರಿಹಾರ ಮತ್ತಿತರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಮತದಾರ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳಲಾಗುವುದು ಎಂದರು.
    ಕಾಂಗ್ರೆಸ್ ಪರವಾಗಿ ಮತದಾರರ ಭಾವನೆ ಇರುವುದನ್ನು ಮೊದಲೇ ಗುರುತಿಸಿದ್ದೆವು. ಹಾಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಲಾಗಿತ್ತು. ಈಗ ಸ್ಪಷ್ಟ ಬಹುಮತ ಬಂದಿದೆ. ೫ ವರ್ಷ ಕಾಲ ಸುಭದ್ರ ಸರ್ಕಾರ ಇರಲಿದೆ ಎಂದು ಹೇಳಿದರು.

    ಬಿಜೆಪಿಗೆ ಅವಕಾಶ ಸಿಕ್ಕಿದ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಸರ್ಕಾರ ಮತ್ತು ಜನರ ಮಧ್ಯೆ ಸೇತುವೆ ಆಗಬಹುದಾಗಿದ್ದ ವಿಧಾನ ಮಂಡಲ ಅಧಿವೇಶನಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಇಷ್ಟು ವರ್ಷ ಆಡಳಿತ ನಡೆಸಿದ ಬಿಜೆಪಿ ಅಭಿವೃದ್ಧಿ ಆಧಾರದಲ್ಲಿ ಚುನಾವಣೆಗೆ ಹೋಗಬೇಕಿತ್ತು ಆದರೆ ಭಾವನಾತ್ಮಕವಾಗಿ ಮತದಾರರ ಸೆಳೆಯಲು ನೋಡಿದರು. ಪ್ರಜ್ಞಾವಂತ ಮತದಾರರು ಇದಕ್ಕೆ ಬೆಲೆ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ದುರ್ಬೀನು ಬಿಟ್ಟುಕೊಂಡು ನೋಡಬೇಕು ಎಂದು ಹಿಂದಿನ ಶಾಸಕರು ಹೇಳಿದ್ದರು. ಅದಕ್ಕೆ ಈಗ ಮತದಾರರೇ ಉತ್ತರ ಕೊಟ್ಟಿದ್ದಾರೆ.

    ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಚುನಾವಣೆಗೋಸ್ಕರ ಕೊಡಗಿಗೆ ಬಂದಿರಲಿಲ್ಲ. ಕೊರೊನಾ ಸಂದರ್ಭದಲ್ಲಿ ನಿಸ್ವಾರ್ಥ ಸೇವೆಗಾಗಿ ಆಗಮಿಸಿದ್ದರು. ಈ ಸಂದರ್ಭ ಕುಗ್ರಾಮಗಳಿಗೂ ತೆರಳಿದ್ದರು. ಹಿಂದಿನ ಶಾಸಕರು ಹೋಗದ ಜಾಗಕ್ಕೂ ತಲುಪಿದ್ದರು. ಈ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. .ವ್ಯಕ್ತಿಗತವಾಗಿ ಸುಳ್ಳು ಅಪಪ್ರಚಾರ, ಅಭ್ಯರ್ಥಿ, ಅವರ ಕುಟುಂಬಕ್ಕೆ ನೋವು ಕೊಡುವ ಕೆಲಸವನ್ನೂ ಮಾಡಲಾಯಿತು. ಆದರೂ ಎಲ್ಲವನ್ನೂ ಪೊನ್ನಣ್ಣ ಕ್ಷಮಿಸಿದರು. ಆದರೆ ಮತದಾರ ಕ್ಷಮಿಸಿಲ್ಲ ಎಂದರು.

    ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ ಎಲ್ಲರ ಶ್ರಮದಿಂದ ಗೆಲುವು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಲಾಗುವುದು. ಮೂಲಭೂತ ಸೌಕರ್ಯಕ್ಕೆ ಆದ್ಯತೆ ಕೊಡಲಾಗುವುದು ಎಂದು ಹೇಳಿದರು.

    ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎ. ಇಸ್ಮಾಯಿಲ್, ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ವಿರಾಜಪೇಟೆ ಪುರಸಭೆ ಸದಸ್ಯ ಎಸ್. ಹೆಚ್. ಮತೀನ್ ಹಾಗೂ ಬೆಟಗೇರಿ ಕಾಂಗ್ರೆಸ್ ಮುಖಂಡ ತೀರ್ಥಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts