ನ್ಯೂಸ್

ಹಾಡಹಗಲೇ ರೌಡಿಗಳ ಅಟ್ಟಹಾಸ, ರಸ್ತೆಯಲ್ಲೇ ಯುವಕನ ಹತ್ಯೆ

ಕಲಬುರಗಿ: ನಗರದ ಮುಖ್ಯರಸ್ತೆಯ ಪಬ್ಲಿಕ್​ ಗಾರ್ಡನ್​ ಮುಂಭಾಗ ಹಾಡಹಗಲೇ ಪುಡಿರೌಡಿಗಳು ಅಟ್ಟಹಾಸ ಮೆರೆದಿದ್ದಾರೆ.

ಪಬ್ಲಿಕ್​ ಗಾರ್ಡನ್​ ಮುಂಭಾಗದಲ್ಲಿ ಖಾರದಪುಡಿ ಅಂಬು ಗ್ಯಾಂಗ್​ ಗುರುವಾರ ಹಾಡಹಗಲೇ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಭೀಕರವಾಗಿ ಕೊಲೆ ಮಾಡಿದೆ. ವೀರೇಶ ಶರಣಬಸಪ್ಪ ಕಡಗಂಚಿ(20) ಕೊಲೆಯಾದವ.

ಆಳಂದ ರಸ್ತೆಯ ರಾಣೋಸ್​ಪೀರ್​ ದರ್ಗಾ ಪ್ರದೇಶ ನಿವಾಸಿ ವೀರೇಶ ಶರಣಬಸಪ್ಪ ಕಡಗಂಚಿ. ಈತ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ. ಪುಡಿರೌಡಿಗಳ ಅಟ್ಟಹಾಸಕ್ಕೆ ಸಿಕ್ಕ ವೀರೇಶ, ಗಾರ್ಡನ್​ ಬಳಿಯ ಮುಖ್ಯ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತ ಪ್ರಾಣಬಿಟ್ಟಿದ್ದಾನೆ.

ಈ ಭೀಕರ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೆಲವರು ಮರುಗಿದರೆ, ಹಲವರು ವಿಡಿಯೋ ಮಾಡುವಲ್ಲಿ ತಲ್ಲೀನರಾಗಿದ್ದರು. ಹಣಕಾಸಿನ ವಿಚಾರವೇ ಕೊಲೆಗೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದರೊಂದಿಗೆ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮತ್ತೆ ಶುರುವಾದಂತಾಗಿದೆ.