ನ್ಯೂಸ್

ಬೈಡೆನ್​ ನಿರ್ಗಮಿಸುತ್ತಿದ್ದಂತೆ ಇಸ್ರೇಲ್​ ಮೇಲೆ ಹಮಾಸ್​ನಿಂದ ರಾಕೆಟ್​ ದಾಳಿ ತೀವ್ರ: ಗಾಜಾಗೆ ಸೀಮಿತ ನೆರವಿಗೆ ಅನುಮತಿ

ಟೆಲ್​ ಅವಿವ್​: ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಇಸ್ರೇಲ್​ನಿಂದ ನಿರ್ಗಮಿಸುತ್ತಿದ್ದಂತೆ ಗಾಜಾ ಪಟ್ಟಿಯಿಂದ ಇಸ್ರೇಲ್​ ಮೇಲೆ ರಾಕೆಟ್​ ದಾಳಿ ತೀವ್ರತೆ ಪಡೆದುಕೊಂಡಿದೆ. ಹಮಾಸ್ ಮತ್ತು ಪ್ಯಾಲೆಸ್ತೀನ್​ನ ಇಸ್ಲಾಮಿಕ್ ಜಿಹಾದಿ ಗುಂಪುಗಳಿಂದ ದಾಳಿ ನಡೆಯುತ್ತಿರುವುದಾಗಿ ಇಸ್ರೇಲ್​ ರಕ್ಷಣಾ ಪಡೆ ತಿಳಿಸಿದೆ.

ಗಾಜಾ ಮೇಲೆ ಇಸ್ರೇಲ್ ಘೋಷಿಸಿದ 'ಸಂಪೂರ್ಣ ಮುತ್ತಿಗೆ' ಸದ್ಯ ಕೊಂಚ ಬಿಡುವು ಪಡೆಯುವ ಸಾಧ್ಯತೆ ಇದೆ. ರಫಾ ಗಡಿಯ ಮೂಲಕ ಗಾಜಾವನ್ನು ಪ್ರವೇಶಿಸಲು ಸ್ಥಳೀಯರಿಗೆ ಸೀಮಿತ ಸಹಾಯ ಮಾಡುವುದಾಗಿ ಇಸ್ರೇಲ್​ ತಿಳಿಸಿದೆ. ಅಲ್ಲದೆ, ಯುದ್ಧಪೀಡಿತ ಪ್ರದೇಶಕ್ಕೆ ಆಹಾರ, ನೀರು ಹಾಗೂ ಇತರೆ ಪೂರೈಕೆಗಳನ್ನು ಸರಬರಾಜು ಮಾಡಲು ಬೆಂಜಮಿನ್​ ನೇತನ್ಯಾಹು ಒಪ್ಪಿಕೊಂಡಿದ್ದಾರೆ. ನಿನ್ನೆ (ಅ.18) ಇಸ್ರೇಲ್​ಗೆ ಭೇಟಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಮನವಿಯಂತೆ ಗಾಜಾಗೆ ಸೀಮಿತ ಅಗತ್ಯಗಳನ್ನು ಪೂರೈಸಲು ನೇತನ್ಯಾಹು ಅನುಮತಿಸಿದ್ದಾರೆ.

ಇಂದು ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಇಸ್ರೇಲ್​ಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನೇತನ್ಯಾಹು ಮತ್ತು ಅಧ್ಯಕ್ಷ ಇಸಾಲ್​ ಹೆರ್ಜಾಗ್​ ಅವರನ್ನು ಭೇಟಿಯಾಗಿ ಯುದ್ಧದ ಪರಿಸ್ಥಿತಿಯ ಬಗ್ಗೆ ಚರ್ಚಿಸಲಿದ್ದಾರೆ.

ನಿನ್ನೆ ಗಾಜಾದ ಆಸ್ಪತ್ರೆಯ ಮೇಲೆ ನಡೆದ ರಾಕೆಟ್​ ದಾಳಿಯಲ್ಲಿ 500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಇಸ್ರೇಲ್​ ಮತ್ತು ಹಮಾಸ್​ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದೆ. ಆದರೆ, ಈ ದಾಳಿಯ ಹಿಂದೆ ಇಸ್ರೇಲ್​ ಎಂಬುದು ನಮ್ಮ ಗುಪ್ತಚರ ವರದಿಗಳು ಖಚಿತಪಡಿಸಿವೆ ಎಂದು ಅಮೆರಿಕ ತಿಳಿಸಿದೆ. ಇನ್ನು ಇಸ್ರೇಲ್​ ಅಧಿಕಾರಿಗಳು ಗಾಜಾ ಭೂ ಆಕ್ರಮಣದ ಬಗ್ಗೆ ಯಾವುದೇ ತಾಜಾ ಕಾಮೆಂಟ್​ಗಳನ್ನು ಮಾಡದಿದ್ದರೂ, ಗಾಜಾದ ಆಕ್ರಮಣಕ್ಕಾಗಿ ಅಮೆರಿಕ, ಇಸ್ರೇಲ್​ಗೆ ತನ್ನ ಬೆಂಬಲ ನೀಡಿದೆ ಎಂದು ವರದಿಗಳು ಹೇಳಿವೆ.

ಅಕ್ಟೋಬರ್​ 7ರಂದು ಮುಂಜಾನೆ ಹಮಾಸ್​​ ಉಗ್ರರು 5000 ರಾಕೆಟ್​ಗಳಿಂದ ಇಸ್ರೇಲ್​ ಮೇಲೆ ದಿಢೀರ್​ ದಾಳಿ ಮಾಡಿದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್​ ಹಮಾಸ್​ ಉಗ್ರರ ಮೇಲೆ ದಾಳಿ ನಡೆಸಿದ್ದು, ಹಮಾಸ್​ ಮತ್ತು ಇಸ್ರೇಲ್​ ನಡುವಿನ ಯುದ್ಧ ಮುಂದುವರಿದಿದೆ. ಸದ್ಯ ಎರಡೂ ಕಡೆಗಳಿಂದ 4 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ.

ಈಜಿಪ್ತ್​ಗೆ ಅನುಮತಿ

ರಫಾ ಗಡಿಯ ಮೂಲಕ ಗಾಜಾ ಪಟ್ಟಿಗೆ ಸೀಮಿತ ಪ್ರಮಾಣದ ಮಾನವೀಯ ನೆರವು ನೀಡಲು ಈಜಿಪ್ಟ್‌ಗೆ ಅವಕಾಶ ನೀಡುವುದಾಗಿ ಇಸ್ರೇಲ್​ ಸರ್ಕಾರ ಘೋಷಿಸಿದೆ. ಯುಎಸ್ ಅಧ್ಯಕ್ಷ ಜೋ ಬಿಡನ್ ಅವರ ಮನವಿ ಹಿನ್ನೆಲೆ ಈ ನಿರ್ಧಾರವನ್ನು ಅನುಮೋದಿಸಲಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಇತ್ತೀಚಿನ ವರದಿಗಳ ಪ್ರಕಾರ ಅಗತ್ಯ ವಸ್ತುಗಳುಳ್ಳ 20 ಟ್ರಕ್‌ಗಳು ದಕ್ಷಿಣ ಗಾಜಾವನ್ನು ಪ್ರವೇಶಿಸಲು ಅನುಮತಿಸಲಾಗಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)