ನವದೆಹಲಿ: ನಡುರಸ್ತೆಯಲ್ಲಿ ಕೂಲಿ ಕಾರ್ಮಿಕನನ್ನು ಅಡಗಟ್ಟಿದ ಖದೀಮರು ಆತನಿಗೆ ಹೆದರಿಸಿ, ಬೆದರಿಸಿ ಜೇಬಿನಲ್ಲಿದ್ದ 3200 ರೂ. ಹಣವನ್ನು ಕದ್ದು ಪರಾರಿಯಾದ ಘಟನೆ ದೆಹಲಿಯ ಹರಿನಗರದಲ್ಲಿ ವರದಿಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ದರೋಡೆಕೋರರ ದುಷ್ಕೃತ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೃಶ್ಯ ನೋಡಿದ ನಗರದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಹಾಡ ಹಗಲೇ ಕಿಡಿಗೇಡಿಗಳ ಗುಂಪೊಂದು ಕೂಲಿ ಕಾರ್ಮಿಕನಿಗೆ ಬೆದರಿಸಿ 3200 ರೂ. ಲೂಟಿ ಮಾಡಿದ್ದಾರೆ ಎಂದು ಹೇಳಲಾಗಿದ್ದು, ದೃಶ್ಯಾವಳಿಯಲ್ಲಿ ದುಷ್ಕರ್ಮಿಗಳು ಹಣ ಕದ್ದ ನಂತರ ಆತನ ಕತ್ತು ಹಿಸುಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
ವಿಡಿಯೋ ಪ್ರಕಾರ, ತನ್ನ ಕೈಗಾಡಿಯ ಪಕ್ಕದಲ್ಲಿ ನಿಂತಿದ್ದ ಕೂಲಿ ಕಾರ್ಮಿಕನನ್ನು ಸುತ್ತುವರೆದಿದ್ದ ಮೂವರು, ಆತನ ಬಳಿ ಹಣ ಕೊಡುವಂತೆ ಬೆದರಿಸಿದ್ದಾರೆ. ಹೆಚ್ಚು ಸಮಯ ತೆಗೆದುಕೊಳ್ಳದ ವ್ಯಕ್ತಿ ತನ್ನ ಜೇಬಿನಿಂದ ಹಣವನ್ನು ಕೊಡುತ್ತಾನೆ. ದುಡ್ಡು ಪಡೆದ ನಂತರ ಸ್ಥಳದಿಂದ ಪರಾರಿಯಾಗಲು ತಮಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಕೆಂಪು ಟೀ ಶರ್ಟ್ ಧರಿಸಿದ್ದ ಕಳ್ಳನು, ವ್ಯಕ್ತಿಯ ಕತ್ತುಹಿಸುಕಿ ಓಡಿ ಹೋಗಿದ್ದಾರೆ.
ನಡುರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಂತ್ರಸ್ತನ ಸಹಾಯಕ್ಕೆ ಕೂಡಲೇ ಯಾರು ಆಗಮಿಸಿಲ್ಲ, ಉಸಿರುಗಟ್ಟಿದ ಪರಿಣಾಮ ಆತ ಕೆಲ ಸಮಯ ನರಳಾಡಿರುವುದು ದೃಶ್ಯದಲ್ಲಿ ಕಂಡುಬಂದಿದೆ,(ಏಜೆನ್ಸೀಸ್).