ಲುಧಿಯಾನ: ಕ್ಯಾಶ್ ಮ್ಯಾನೇಜ್ಮೆಂಟ್ ಸರ್ವೀಸ್(CMS) ಕಚೇರಿಯಿಂದ ಕಳ್ಳರ ಗುಂಪೊಂದು 7 ಕೋಟಿ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿರುವ ಪಂಜಾಬ್ನ ಲುಧಿಯಾನದಲ್ಲಿ ನಡೆದಿದೆ.
ಲುಧಿಯಾನದ ನ್ಯೂ ರಾಜ್ಗುರು ನಗರದಲ್ಲಿರುವ ಕಚೇರಿಗೆ ಶನಿವಾರ ಮಧ್ಯರಾತ್ರಿ 1:30ರ ಸುಮಾರಿಗೆ ಶಸ್ತ್ರಸಜ್ಜಿತವಾಗಿ ಬಂದಿದ್ದ 10 ಮಂದಿ ಕಳ್ಳರು ಅಲ್ಲಿನ ಸೆಕ್ಯೂರಿಟಿ ಗಾರ್ಡ್ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಲುಧಿಯಾನ ನಗರ ಪೊಲೀಸ್ ಆಯುಕ್ತರಾದ ಮಂದೀಪ್ ಸಿಂಗ್ ಸಿಧು ಘಟನೆಯೂ ತಡರಾತ್ರಿ 1:30ರ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿಗಳು ಕರತ್ಯಕ್ಕೆ ಬಳಸಿದ್ದ ಮುಲ್ಲಾನ್ಪುರ ಢಾಖಾ ಬಳಿ ಪತ್ತೆಯಾಗಿದ್ದ ವಾಹನದಲ್ಲಿ ಎರಡು ಶಸ್ತ್ರಾಸ್ತ್ರಗಳು ಸಹ ದೊರೆತಿವೆ.
ಕಂಪನಿಯ ಬೇಜವಾಬ್ದಾರಿತನದ ಬಗ್ಗೆ ಕಿಡಿಕಾರಿದ ಮಂದೀಪ್ ಸಿಂಗ್ ಹಣವನ್ನು ಕರೆನ್ಸಿ ಚೆಸ್ಟ್ನಲ್ಲಿ ಇಡುವ ಬದಲು ಹೊರಗೆ ಇಡಲಾಗಿದೆ. ಕಳ್ಳರು ಸಿಸಿಟಿವಿಯ ಡಿವಿಆರ್ಗಳನ್ನು ಸಹ ದೋಚಿದ್ದಾರೆ. ದರೋಡೆ ನಡೆದಾಗ ಕಂಪನಿಗೆ ಸೇರಿದ ಸುಮಾರು 16ಕ್ಕೂ ಹೆಚ್ಚು ವಾಹನಗಳು ಕಾಂಪೌಂಡ್ನಲ್ಲಿ ನಿಂತಿದ್ದವು.
ಸೆಕ್ಯೂರಿಟಿ ಗಾರ್ಡ್ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು ಪ್ರಧೇಶದ ಸುತ್ತ ಇರುವ ಸಿಸಿಟಿವಿ ಕ್ಯಾಮರಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಲುಧಿಯಾನ ನಗರ ಪೊಲೀಸ್ ಆಯುಕ್ತ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.