ನಿಷೇಧಿತ ಉಗ್ರ ಸಂಘಟನೆಗಯೊಂದಿಗೆ ನಂಟು; ನಾಲ್ವರು ಆರೋಪಿಗಳು ಅರೆಸ್ಟ್​

ISKF
Published on

ಅಹಮದಾಬಾದ್: ಗುಜರಾತ್​ ಎಟಿಎಸ್​ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಿಷೇಧಿತ ಇಸ್ಲಾಮಿಕ್​ ಸ್ಟೇಟ್ ಆಫ್ ಖೊರಾಸನ್ ಪ್ರಾವಿನ್ಸ್(ISKP) ಮಾಡ್ಯೂಲ್​​ಅನ್ನು ಪೋರ್​ಬಂದರ್​ ಹಾಗೂ ಸೂರತ್​ನಲ್ಲಿ ಭೇದಿಸಲಾಗಿದೆ.

ಬಂಧಿತರ ಪೈಕಿ ಓರ್ವ ಸೂರತ್​ ಮೂಲದ ಮಹಿಳೆ ಸೇರಿದಂತೆ ಜಮ್ಮು-ಕಾಶ್ಮೀರ ಮೂಲದ ಮೂವರು ಪುರುಷರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಟಿಎಸ್​ನ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

ನಿಷೇಧಿತ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಎಟಿಎಸ್​ ಅಧಿಕಾರಿಗಳು ಪೋರ್​ಬಂದರ್​​ ಹಾಗೂ ಸೂರತ್​ನಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಬಂಧಿತರ ಬಳಿ ಇದ್ದ ಜಿಹಾದಿ ಸಾಹಿತ್ಯ ಇರುವ ಪೋಸ್ಟರ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರು ಫಿಶಿಂಗ್​ ಬೋಟ್​ ಮೂಲಕ ಅಂತರಾಷ್ಟ್ರೀಯ ಸಮುದ್ರ ಗಡಿಯನ್ನು ದಾಟಿ ಇರಾನ್​ ಮೂಲಕ ಅಫ್ಘಾನಿಸ್ತಾನ ತಲುಪಲು ಯೋಚಿಸಿದ್ದರು. ಶುಕ್ರವಾರ ಬೆಳಗ್ಗೆ ಆರೋಪಿಗಳು ಪೋರ್​ಬಂದರ್​ನಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಬೆನ್ನಲ್ಲೇ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಡಿಜಿಪಿ ವಿಕಾಸ್​ ಸಹಾಯ್​ ತಿಳಿಸಿದ್ದಾರೆ.

ಬಂಧಿತರನ್ನು ಜಮ್ಮು-ಕಾಶ್ಮೀರ ಮೂಲದ ಉಬೇದ್​ ನಾಸೀರ್​ ಮಿರ್​, ಹನನ್ ಹಯಾತ್ ಶೋಲ್ ಮತ್ತು ಮೊಹಮ್ಮದ್ ಹಾಜಿಮ್ ಶಾ, ಸುಮೇರಾಬಾನು ಹನೀಫ್ ಮಾಲೆಕ್ ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ISKPಯ ಅಬು ಹಮ್ಜಾ ಎಂಬ ಹ್ಯಾಂಡಲರ್​ ತಮಗೆ ತರಭೇತಿ ನೀಡುತ್ತಿದ್ದ ಎಂದು ಹೇಳಿದ್ದಾರೆ.

ಬಂಧಿತರಿಂದ ಹಲವು ದಾಖಲೆಗಳು, ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಲಯದಲ್ಲಿ ಆರೋಪಿಗಳನ್ನು ಹಾಜರುಪಡಿಸಲಾಗುವುದು ಎಂದು ಡಿಜೆಪಿ ವಿಕಾಸ್​ ಸಹಾಯ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net