ನ್ಯೂಸ್

ಅಮೆಜಾನ್​ ಹಿಂದಿಕ್ಕಿ ಬಿಗ್​ ಬಜಾರ್​ ತೆಕ್ಕೆಗೆ ಪಡೆದ ಅಂಬಾನಿ...?

ನವದೆಹಲಿ: ವಿಶ್ವದ ಸಿರಿವಂತರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ರಿಲಯನ್ಸ್​ ಇಂಡಸ್ಟ್ರೀಸ್​ನ ಮುಖ್ಯಸ್ಥ ಮುಖೇಶ್​ ಅಂಬಾನಿ ವಾಣಿಜ್ಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವ ಸನಿಹದಲ್ಲಿದ್ದಾರೆ.

ಬಿಗ್​ ಬಜಾರ್​ ಸೂಪರ್​ ಮಾರ್ಕೆಟ್​ಅನ್ನು ಸರಣಿಯನ್ನು ರಿಲಯನ್ಸ್​ ಇಂಡಸ್ಟ್ರಿಸ್​ ತೆಕ್ಕೆಗೆ ತೆಗೆದುಕೊಳ್ಳಲಿದ್ದಾರೆ. ಜುಲೈ 15ರೊಳಗಾಗಿ ಈ ಕುರಿತ ಒಪ್ಪಂದ ಏರ್ಪಡಲಿದೆ ಎಂದು ಹೇಳಲಾಗಿದೆ.

ಬಿಗ್​ ಬಜಾರ್​, ಫುಡ್​ ಬಜಾರ್​, ಫ್ಯಾಷನ್​ ಅಟ್​ ಬಿಗ್​ ಬಜಾರ್​, ಇ-ಝೋನ್​ ಹಾಗೂ ಫುಡ್​ ಹಾಲ್​ಗಳ ಸರಣಿ ಸೂಪರ್​ ಮಾರ್ಕೆಟ್​ಗಳು ಫ್ಯೂಚರ್​ ಗ್ರೂಪ್​ ಅಧೀನದಲ್ಲಿವೆ. ಇದರ ಮುಖ್ಯಸ್ಥ ಕಿಶೋರ್​ ಬಿಯಾನಿಯೊಂದಿಗೆ ಮುಖೇಶ್​ ಅಂಬಾನಿ ಮಾತುಕತೆ ನಡೆಸಿದ್ದಾರೆ. ಜುಲೈ 15ರಂದು ನಡೆಯಲಿರುವ ರಿಲಯನ್ಸ್​ ಇಂಡಸ್ಟ್ರೀಸ್​ನ ವಾರ್ಷಿಕ ಮಹಾಸಭೆ ವೇಳೆ ಈ ಕುರಿತ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.

ಸಾಲದಿಂದ ಕಂಗೆಟ್ಟಿರುವ ಕಿಶೋರ್​ ಬಿಯಾನಿ ತನ್ನ ವಹಿವಾಟನ್ನು ಮಾರುವ ಉದ್ದೇಶದೊಂದಿಗೆ ಹಲವರೊಂದಿಗೆ ಮಾತುಕತೆ ನಡೆಸಿದ್ದರು. ಫ್ಯೂಚರ್​ ಗ್ರೂಪ್​ನಲ್ಲಿ ಬಂಡವಾಳ ತೊಡಗಿಸಲು ಅಜೀಮ್​ ಪ್ರೇಮ್​ಜಿ ಇನ್​ವೆಸ್ಟ್​, ಸಮಾರಾ ಕ್ಯಾಪಿಟಲ್​ ಹಾಗೂ ಅಮೆಜಾನ್​ ಜೆಫ್​ ಬಿಜೋಸ್​ ಉತ್ಸುಕರಾಗಿದ್ದರು.

ಅಮೆಜಾನ್​ ಈ ಹಿಂದೆಯೇ ಫ್ಯೂಚರ್​ ಗ್ರೂಪ್​ನಲ್ಲಿ ಬಂಡವಾಳ ಹೂಡಲು ಮುಂದಾಗಿತ್ತು. ಇದಲ್ಲದೇ, ಪರೋಕ್ಷವಾಗಿ ಬಿಗ್​ ಬಜಾರ್​ನಲ್ಲಿ ಕೊಂಚ ಹೂಡಿಕೆ ಮಾಡಿದೆ.

ಸದ್ಯ ಫ್ಯೂಚರ್​ ರಿಟೇಲ್​, ಫ್ಯೂಚರ್​ ಲೈಫ್​ಸ್ಟೈಲ್​ ಪ್ಯಾಷನ್ಸ್​, ಫ್ಯೂಚರ್​ ಸಪ್ಲೈ ಚೈನ್​ ಸೊಲ್ಯೂಷನ್ಸ್​ ಈ ಸಮೂಹ ನಿರ್ವಹಿಸುತ್ತಿದೆ. ಮೊದಲು ಈ ಮೂರನ್ನು ಒಂದಾಗಿಸಲಾಗುತ್ತದೆ. ನಂತರ ಒಂದೇ ಸಂಸ್ಥೆಯನ್ನು ರಿಲಯನ್ಸ್​ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ.

ಕಳೆದ ವಾರದವರೆಗೂ ರಿಲಯನ್ಸ್​ ಜತೆಗಿನ ಒಪ್ಪಂದ ಖಚಿತವಾಗಿರಲಿಲ್ಲ. ಸದ್ಯ ಈ ಒಪ್ಪಂದ ಸ್ಪಷ್ಟ ದಿಕ್ಕಿನಲ್ಲಿ ಸಾಗುತ್ತಿದ್ದು, ರಿಲಯನ್ಸ್​ ತೆಕ್ಕೆಗೆ ಸೇರುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.