ನ್ಯೂಸ್

ಸುಶಾಂತ್​ನನ್ನು 3 ತಿಂಗಳು ಇಟ್ಟಿದ್ದೆಲ್ಲಿ ರಿಯಾ? ಆಕೆಯಿಂದಲೇ ಆಪತ್ತು; ನಾಲ್ಕು ತಿಂಗಳ ಮುನ್ನವೇ ಪೊಲೀಸರಿಗಿತ್ತು ಮಾಹಿತಿ

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಜೀವಕ್ಕೆ ಅಪಾಯವಿದೆ...! ಇಂಥದ್ದೊಂದು ಆತಂಕಕಾರಿ ವಿಚಾರವನ್ನು ಆತನ ಸಾವಿಗೂ ನಾಲ್ಕು ತಿಂಗಳ ಮುನ್ನವೇ ಮುಂಬೈ ಪೊಲೀಸರ ಗಮನಕ್ಕೆ ತಂದಿತ್ತು ನಟನ ಕುಟುಂಬ...!

ಮುಂಬೈ ಪೊಲೀಸರಿಗೆ ಇಂಥದ್ದೊಂದು ವಾಟ್ಸ್ಯಾಪ್​ ಸಂದೇಶ ಕಳುಹಿಸಿದ್ದರ ಸ್ಕ್ರೀನ್​ಶಾಟ್​ಅನ್ನು ಸುಶಾಂತ್​ ಕುಟುಂಬ ಇದೀಗ ಬಹಿರಂಗಗೊಳಿಸಿದೆ.

ಸುಶಾಂತ್​ ಜೀವಕ್ಕೆ ಅಪಾಯವಿದೆ ಹಾಗೂ ಗೆಳತಿ ರಿಯಾ ಚಕ್ರವರ್ತಿ ಆತನನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ರೆಸಾರ್ಟ್​ನಲ್ಲಿ ಮೂರು ತಿಂಗಳಿನಿಂದ ಇರಿಸಿದ್ದಾಳೆ ಎಂದು ಸಂದೇಶದಲ್ಲಿ ಹೇಳಲಾಗಿದೆ.

ಈ ವಿಚಾರವನ್ನು ಸುಶಾಂತ್​ ಕುಟುಂಬದ ಪರ ವಕೀಲರು ಹೇಳಿಕೊಂಡಿದ್ದರು. ಇದೀಗ ಅದಕ್ಕೆ ಸಾಕ್ಷ್ಯವನ್ನು ಬಿಡುಗಡೆ ಮಾಡಿದಂತಾಗಿದೆ. 2020ರ ಫೆಬ್ರವರಿ 25ರಂದು ಕಳುಹಿಸಿದ್ದ ಸಂದೇಶ ಇದಾಗಿದೆ.

ವಿಪರ್ಯಾಸವೆಂದರೆ, ಇದರ ಆಧಾರದಲ್ಲಿ ಮುಂಬೈ ಪೊಲೀಸರು ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಕುಟುಂಬ ಆರೋಪಿಸಿದೆ. ಸುಶಾಂತ್​ ಸಂಪೂರ್ಣವಾಗಿ ರಿಯಾಳ ನಿಯಂತ್ರಣದಲ್ಲಿದ್ದಾನೆ ಎಂದು ಈ ಸಂದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು.

ಇದಾದ ಬಳಿಕ ಜೂನ್​ 14ರಂದು ಸುಶಾಂತ್​ ಸಿಂಗ್​ ಶವ ಬಾಂದ್ರಾದ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಸುಶಾಂತ್​ ಸಿಂಗ್​ ತಂದೆ ಕೃಷ್ಣಕುಮಾರ್​ ಸಿಂಗ್​ ಬಿಹಾರ ಪೊಲೀಸರಿಗೆ ದೂರು ನೀಡಿದ ಬಳಿಕ, ರಿಯಾಳನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಆದರೆ, ಆಕೆ ವಿಚಾರಣೆಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾಳೆ ಎಂದು ಆರೋಪಿಸಲಾಗಿದೆ.