ಮುಂಬೈ: ದಕ್ಷಿಣ ಆಫ್ರಿಕಾದಿಂದ ಮರಳಿದ ಮಹಾರಾಷ್ಟ್ರದ ಪುರುಷನೊಬ್ಬನಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಒಮಿಕ್ರಾನ್ ರೂಪಾಂತರಿ ಭಾರತ ಪ್ರವೇಶಿಸಿತೇ ಎಂಬ ಪ್ರಶ್ನೆ ಮೂಡಿಸಿದೆ. ಥಾಣೆ ಜಿಲ್ಲೆಯ ದಾಂಬಿವಲಿಯ ನಿವಾಸಿಯಾದ ಈತನನ್ನು ಐಸೋಲೇಷನ್ನಲ್ಲಿರಿಸಲಾಗಿದ್ದು, ಜೀನೋಮ್ ಸೀಕ್ವೇಂಸಿಂಗ್ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಲಾಗಿದೆ ಎಂದು ನಗರಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ರಿಕಾದ ಕೇಪ್ ಟೌನ್ನಿಂದ ನ.24 ರಂದು ವಿಮಾನದಲ್ಲಿ ಥಾಣೆ ತಲುಪಿದ ಈ ವ್ಯಕ್ತಿಯ ಕರೊನಾ ಪರೀಕ್ಷೆ ಪಾಸಿಟಿವ್ ಬಂದಿದ್ದು, ಅವನನ್ನು ಕಲ್ಯಾಣ್-ದಾಂಬಿವಲಿ ಮುನಿಸಿಪಲ್ ಕಾರ್ಪೋರೇಷನ್ನಿನ ಆರ್ಟ್ ಗ್ಯಾಲರಿ ಐಸೋಲೇಷನ್ ಸೆಂಟರಿನಲ್ಲಿರಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ. ಪ್ರತಿಭಾ ಪನ್ಪಾಟೀಲ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ, ವಿಶ್ವ ಆರೋಗ್ಯ ಸಂಸ್ಥೆಯು ವೇರಿಯೆಂಟ್ ಆಫ್ ಕರ್ನರ್ನ್ ಎಂದು ಘೋಷಿಸಿದ ಒಮಿಕ್ರಾನ್ ರೂಪಾಂತರಿ ದಕ್ಷಿಣಾ ಆಫ್ರಿಕಾದಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕ್ಕೆ ಎಡೆಮಾಡಿದೆ. ಈ ಅಂತಾರಾಷ್ಟ್ರೀಯ ಪ್ರಯಾಣಿಕನಿಗೆ ತಗುಲಿರುವ ಸೋಂಕಿಗೆ ಕರೊನಾದ ಯಾವ ರೂಪಾಂತರಿ ಕಾರಣವಾಗಿದೆ ಎಂದು ಪತ್ತೆ ಹಚ್ಚಲಾಗುತ್ತಿದೆ. ಹೊಸ ರೂಪಾಂತರಿಯನ್ನು ಎದುರಿಸಲೂ ನಾವು ಸಿದ್ಧರಾಗಿದ್ದೇವೆ ಎಂದು ವೈದ್ಯಾಧಿಕಾರಿ ಹೇಳಿದ್ದಾರೆ. (ಏಜೆನ್ಸೀಸ್)