ಶ್ರೀನಗರ: ಮಸೀದಿಯನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ನಡೆದಿದೆ. ಮೊಹಮ್ಮದ್ ಶಫಿ ಮಿರ್ ಮೃತರು ಎಂದು ತಿಳಿದು ಬಂದಿದ್ದು, ದಾಳಿ ನಡೆದ ವೇಳೆ ಇವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಉಗ್ರರು ಬಾರಾಮುಲ್ಲಾದ ಗಂಟಮುಲ್ಲಾ ಬಾಳ ಪ್ರದೇಶದಲ್ಲಿರುವ ಮಸೀದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ಪ್ರಾರ್ಥನೆ ಸಲ್ಲಿಸುತ್ತಿದ್ದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಶಫಿ ಮಿರ್ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.
ಘಟನೆ ಬಳಿಕ ಉಗ್ರರು ಪರಾರಿಯಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆ ನಡೆದ ಪ್ರದೇಶವನ್ನು ಪೊಲೀಸರು ಹಾಗೂ ಸೇನೆಯ ಅಧಿಕಾರಿಗಳು ಸುತ್ತುವರೆದಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.