ಬೆಂಗಳೂರು: ಕಾಂತರಾಜ್ ವರದಿ ತಿರಸ್ಕರಿಸುವ ಜತೆಗೆ ಮೀಸಲಾತಿ ಪ್ರಮಾಣವನ್ನೂ ಹೆಚ್ಚಿಸಬೇಕು ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಒತ್ತಾಯಿಸಿದೆ. ನೂತನವಾಗಿ ಆಯ್ಕೆ ಆಗಿರುವ ಒಕ್ಕಲಿಗ ಸಮುದಾಯದ ಶಾಸಕ, ಸಚಿವರು ಮತ್ತು ಅಧಿಕಾರಿಗಳಿಗೆ ರಾಜ್ಯ ಒಕ್ಕಲಿಗ ಸಂಘದ ಆವರಣದಲ್ಲಿ ಇಂದು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಈ ಸಚಿವರಿಗೆ ಮೀಸಲಾತಿ ಕುರಿತು ಮನವಿ ಮಾಡಿಕೊಳ್ಳಲಾಗಿದೆ.
ಕಾಂತರಾಜ್ ಸಮಿತಿ ವರದಿಯಲ್ಲಿ ಒಕ್ಕಲಿಗರ ಪ್ರಮಾಣವನ್ನು ಶೇ. 14ರ ಬದಲು ಶೇ. 12 ಎಂದು ತೋರಿಸಿದ್ದಾರೆ. ಹೀಗಾಗಿ ಅದನ್ನು ಒಪ್ಪಿಕೊಂಡರೆ ನಮ್ಮ ಸಮುದಾಯಕ್ಕೆ ಅನ್ಯಾಯ ಆಗುತ್ತದೆ. ಆದ್ದರಿಂದ ಕಾಂತರಾಜ್ ಸಮಿತಿ ವರದಿಯನ್ನು ತಿರಸ್ಕರಿಸಬೇಕು ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.
ರಾಜ್ಯದಲ್ಲಿ ಒಕ್ಕಲಿಗರ ಜನಸಂಖ್ಯೆ ಈಗ ಜಾಸ್ತಿ ಆಗಿರುವುದರಿಂದ ಮೀಸಲಾತಿ ಪ್ರಮಾಣವನ್ನು ಏರಿಸಬೇಕು. ಒಕ್ಕಲಿಗರಿಗೆ ಸದ್ಯ ಶೇ. 6 ಮೀಸಲಾತಿ ಇದ್ದು, ಅದನ್ನು ಶೇ. 8ಕ್ಕೆ ಹೆಚ್ಚಿಸಬೇಕು ಎಂದು ಚುಂಚಶ್ರೀ ಬಳಗದಿಂದ ಶ್ರೀಗಳ ಸಮ್ಮುಖದಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ನೂತನವಾಗಿ ಆಯ್ಕೆ ಆಗಿರುವ ಒಕ್ಕಲಿಗ ಸಮಾಜದ ಸಚಿವರು, ಶಾಸಕರು ಮಾತ್ರವಲ್ಲದೆ ಯುಪಿಎಸ್ಸಿ, ಕೆಪಿಎಸ್ಸಿ, ಐಎಎಸ್, ಐಪಿಎಸ್, ಕೆಎಎಸ್, ಕೆಎಸ್ಪಿಎಸ್ ಹಾಗೂ ಇತರ ಉನ್ನತ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ನಂಜಾವಧೂತ ಸ್ವಾಮೀಜಿ, ಸಚಿವರಾದ ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಕೆ. ವೆಂಕಟೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಮತ್ತಿತರರು ಉಪಸ್ಥಿತರಿದ್ದರು.