ಗುವಾಹಟಿ: ಭಾರತದ ಖ್ಯಾತ ಕ್ಯಾನ್ಸರ್ ರೋಗ ತಜ್ಞ, ಪದ್ಮಶ್ರೀ ಡಾ. ರವಿ ಕಣ್ಣನ್ ಅವರು 2023ನೇ ಸಾಲಿನ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ಏಷ್ಯಾದ ನೋಬೆಲ್ ಎಂದೇ ಖ್ಯಾತಿ ಪಡೆದಿದೆ.
2023ನೇ ಸಾಲಿನ ರಾಮನ್ ನ್ಯಾಗ್ಸೆಸೆ ಪ್ರಶಸ್ತಿ ನಾಲ್ವರಿಗೆ ಹಂಚಿಕೆಯಾಗಿದ್ದು, ಅದರಲ್ಲಿ ಖ್ಯಾತ ಕ್ಯಾನ್ಸರ್ ರೋಗ ತಜ್ಞ ಡಾ. ರವಿ ಕಣ್ಣನ್ ಕೂಡ ಒಬ್ಬರು. ರವಿ ಅವರ ಜೊತೆಗೆ ಕೊರ್ವಿ ರಕ್ಷಂದ್, ಯುಜೆನಿಯೊ ಲೆಮೋಸ್, ಮಿರಿಯನ್ ಕೊರೊನೆಲ್ ಫೆರರ್‌ಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.
2007ರಿಂದ ಅಸ್ಸಾಂನ Cachar Cancer Hospital And Research Centre(CCHRC)ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ರವಿ ಕಣ್ಣನ್ ಅವರು ಈ ಮೊದಲು ಚೆನ್ನೈನಲ್ಲಿರುವ ಅಡ್ಯಾರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹೆಡ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದರು.
ತಮಗೆ ಪ್ರತಿಷ್ಠಿತ ನ್ಯಾಗ್ಸೆಸೆ ಪ್ರಶಸ್ತಿ ಲಭಿಸಿರುವ ಕುರಿತು ಪ್ರತಿಕ್ರಿಯಿಸಿರುವ ರವಿ ಕಣ್ಣನ್ ಇದು ನಾನು ಕೆಲಸ ಮಾಡುತ್ತಿರುವ ಆಸ್ಪತ್ರೆಗೆ ಸಂದ ಗೌರವವಾಗಿದೆ. ನಾವು ಇಲ್ಲಿ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದು, ನಮಗೆ ಬೆಂಬಲ ನೀಡುತ್ತಿರುವ ಪ್ರತಿಯೊಬ್ಬರು ಸಹ ಪ್ರಶಸ್ತಿ ವಿಜೇತರು ಎಂದು ಕ್ಯಾನ್ಸರ್ ತಜ್ಞ ರವಿ ಕಣ್ಣನ್ ಸಂತಸ ವ್ಯಕ್ತಪಡಿಸಿದ್ದಾರೆ.