ನ್ಯೂಸ್

ಮನೆಮನೆಗೂ ಬರಲಿದೆ ರವಿ ಬೆಳಗೆರೆಯ 'ಹೇಳಿ ಹೋಗು ಕಾರಣ'; ಶೀಘ್ರದಲ್ಲೇ ದೃಶ್ಯರೂಪದಲ್ಲಿ…

ಬೆಂಗಳೂರು: ಖ್ಯಾತ ಲೇಖಕ, ಪತ್ರಕರ್ತ ರವಿ ಬೆಳಗೆರೆಯ ಕಾದಂಬರಿಗಳ ಪೈಕಿ ಯುವಜನತೆಯ ಹೃದಯ ಕದ್ದ, ಅಂದಿಗೂ ಇಂದಿಗೂ ಎಂದೆಂದಿಗೂ ಮತ್ತದೇ ಆಸಕ್ತಿಯಿಂದ ಓದಿಸಿಕೊಂಡು ಹೋಗುವಂಥ ಎರಡು ಪ್ರಮುಖ ಕಾದಂಬರಿಗಳೆಂದರೆ ಒಂದು ʼಹೇಳಿ ಹೋಗು ಕಾರಣʼ, ಇನ್ನೊಂದು ʼನೀ ಹಿಂಗ ನೋಡಬ್ಯಾಡ ನನ್ನ..ʼ.

ಇದೀಗ ಆ ಎರಡು ಕಾದಂಬರಿಗಳ ಪೈಕಿ ʼಹೇಳಿ ಹೋಗು ಕಾರಣʼ ನಾಡಿನ ಮನೆಮನಗಳಿಗೂ ತಲುಪಲಿದೆ. ಅರ್ಥಾತ್‌, ʼಹೇಳಿ ಹೋಗು ಕಾರಣʼ ಇದೀಗ ಧಾರಾವಾಹಿ ಆಗಿ ಮೂಡಿ ಬರುತ್ತಿದ್ದು, ಶೀಘ್ರದಲ್ಲೇ ಅದರ ಪ್ರಸಾರ ಆರಂಭವಾಗಲಿದೆ. ಮೋಡಿ ಮಾಡಿರುವ ಈ ಕಾದಂಬರಿ, ಧಾರಾವಾಹಿ ಆಗಿ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಇದೀಗ ಓದುಗರಲ್ಲಿ ಉಂಟಾಗಿದ್ದರೂ ಅಚ್ಚರಿ ಏನಲ್ಲ.

ಕೋರಮಂಗಲ ಅನಿಲ್‌ ಅವರ ನಿರ್ದೇಶನ ಹಾಗೂ ಚೇತನ್‌ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯಲ್ಲಿ ನಾಯಕಿಯಾಗಿ ರಕ್ಷಾ ಗೌಡ, ನಾಯಕನಾಗಿ ಸೂರಜ್‌ ಅಭಿನಯಿಸುತ್ತಿದ್ದಾರೆ. ಸ್ಟಾರ್‌ ಸುವರ್ಣದಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದ್ದು, ಸಮಯ ಹಾಗೂ ದಿನಾಂಕ ಸದ್ಯದಲ್ಲೇ ಘೋಷಣೆ ಆಗಲಿದೆ.