ಮುಂಬೈ: "ನಮಸ್ತೆ" ಎಂದು ನೇರವಾಗಿ ಹೇಳುವ ಬದಲು "ಪಾರ್ಥನೆ ರೀತಿಯ ಸಂಕೇತ" ಎಂದಿರುವ ಅಮೆರಿಕನ್ ನ್ಯೂಸ್ ಚಾನೆಲ್ 'ಎಬಿಸಿ'ಗೆ ಬಾಲಿವುಡ್ ನಟಿ ರವೀನಾ ಟಂಡನ್ ಸಖತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಎಬಿಸಿ ಚಾನೆಲ್ ತನ್ನ ಟ್ವಿಟರ್ ಖಾತೆಯಲ್ಲಿ ಯುನೈಟೆಂಡ್ ಕಿಂಗ್ಡಮ್ ಪ್ರಿನ್ಸ್ ಚಾರ್ಲ್ಸ್ ಅವರ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ.
ವಿಡಿಯೋದಲ್ಲಿ ಏನಿದೆ?: ಕಾರ್ಯಕ್ರಮಕ್ಕೆ ಆಗಮಿಸುವ ಪ್ರಿನ್ಸ್ ಚಾರ್ಲ್ಸ್ ಕಾರಿನಿಂದ ಇಳಿದ ಬಳಿಕ ತಮ್ಮನ್ನು ಸ್ವಾಗತಿಸುವ ವ್ಯಕ್ತಿಗೆ ಶೇಕ್ ಹ್ಯಾಂಡ್ ಮಾಡಲು ಮುಂದಾಗುತ್ತಾರೆ. ಈ ವೇಳೆ ಕರೊನಾ ಭೀತಿ ಅರಿವಾಗಿ ತಕ್ಷಣ ತಮ್ಮ ಕೈಗಳನ್ನು ಹಿಂತೆಗೆದುಕೊಂಡು ಭಾರತೀಯ ಸಂಸ್ಕೃತಿಯಂತೆ ಎರಡು ಕೈಗಳನ್ನು ಜೋಡಿಸಿ ನಮಸ್ತೆ ಮಾಡುತ್ತಾರೆ. ಬಳಿಕ ಎಲ್ಲ ಅತಿಥಿಗಳ ಮುಂದೆ ಅದನ್ನೇ ಪಾಲಿಸುತ್ತಾರೆ.
ಕರೊನಾ ಕಾಳಜಿಯಿಂದ ಅತಿಥಿಗಳೊಂದಿಗೆ ಹ್ಯಾಂಡ್ ಶೇಕ್ ಮಾಡದೆ ಪ್ರಿನ್ಸ್ ಚಾರ್ಲ್ಸ್ ಪಾರ್ಥನೆ ರೀತಿಯ ಸಂಕೇತವನ್ನು ಬಳಸಿದ್ದಾರೆ ಎಂದು ಎಬಿಸಿ ಟ್ವಿಟರ್ನಲ್ಲಿ ಬರೆದುಕೊಂಡಿದೆ.
ಇದಕ್ಕೆ ರೀಟ್ವೀಟ್ ಮಾಡಿರುವ ರವೀನಾ ಟಂಡನ್, ಅದು ಪಾರ್ಥನೆ ರೀತಿಯ ಸಂಕೇತವಲ್ಲ. ಅದನ್ನು ನಮಸ್ತೆ ಎಂದು ಕರೆಯುತ್ತಾರೆ. ಸಾರ್ವಜನಿಕವಾಗಿ ಹೇಳುವ ಮುನ್ನ ಅದೇನೆಂದು ತಿಳಿಯಲು ಮನೆಯಲ್ಲಿ ಸ್ವಲ್ಪ ಹೋಮ್ವರ್ಕ್ ಮಾಡಿಕೊಳ್ಳಿ ಎಂದು ಎಬಿಸಿಗೆ ರವೀನಾ ನಮಸ್ತೆ ಪಾಠ ಮಾಡಿದ್ದಾರೆ. (ಏಜೆನ್ಸೀಸ್)