ನ್ಯೂಸ್

ನೀವಿಲ್ಲ ಎಂಬ ವಿಚಾರವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ; ರತನ್​ ಟಾಟಾ ನಿಧನಕ್ಕೆ ಕಂಬನಿ ಮಿಡಿದ Ex Girlfriend

ನವದೆಹಲಿ: ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಖ್ಯಾತ ಉದ್ಯಮಿ ರತನ್​ ಟಾಟಾ (Ratan Tata) (86) ಅಕ್ಟೋಬರ್ 09ರಂದು ವಿಧಿವಶರಾಗಿದ್ದು, ತಮ್ಮ ಸ್ವಂತ ಪರಿಶ್ರಮದಿಂದಲೇ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವನ್ನು (India) ಟಾಟಾ (Tata) ಹೆಸರಿನೊಂದಿಗೆ ಗುರುತಿಸುವಂತೆ ಮಾಡಿದ್ದರು. ರತನ್​ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದು, ಅವರ ಮಾಜಿ ಪ್ರೇಯರಿ (Ex Girlfriend) ಕೂಡ ಕಂಬನಿ ಮಿಡಿದಿದ್ದಾರೆ.

ಕಳೆದ ಕೆಲ ದಿನಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ರತನ್​ ಟಾಟಾ ಸೋಮವಾರ (ಅಕ್ಟೋಬರ್​ 07) ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆ ಸೇರಿದ್ದರು. ಈ ವೇಳೆ ಅವರ ದೈಹಿಕ ಪರಿಸ್ಥಿತಿ ಹದಗೆಟ್ಟಿರುವುದಾಗಿ ಸುದ್ದಿ ಹರಿದಾಡಿತ್ತು. ಈ ಸಂಬಂಧ ರತನ್​ ಟಾಟಾ ಅವರ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಲಾಗಿತ್ತು. ವಯೋಸಹಜ ಕಾರಣಗಳಿಗಾಗಿ ತಪಾಸಣೆಗೊಳಪಟ್ಟಿದ್ದಾರೆ. ಆತಂಕಗೊಳ್ಳುವಂಥದ್ದೇನು ಇಲ್ಲ ಎಂದು ಹೇಳಲಾಗಿತ್ತು. ಆದರೆ ಬುಧವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಸಾವು ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದ್ದು, ರತನ್​ ನಿಧನದ ಕುರಿತಾಗಿ ಮಾಜಿ ಪ್ರೇಯಸಿ (Ex GirlFriend) ಸಿಮಿ ಗರೆವಾಲ್(Simi Garewal) ಭಾವನಾತ್ಮಕ ಪೋಸ್ಟ್​ ಒಂದನ್ನು ಬರೆದಿದ್ದಾರೆ.

ನೀವು ಇನ್ನಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನೀವಿಲ್ಲ ಎಂಬ ವಿಚಾರವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ..ತುಂಬಾ ಕಷ್ಟ.. ವಿದಾಯ ನನ್ನ ಗೆಳೆಯ ಎಂದು ಭಾವನಾತ್ಮಕ ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನೇಕರು ಕಂಬನಿ ಮಿಡಿದಿದ್ದಾರೆ.

ಪದ್ಮವಿಭೂಷಣ: ರತನ್​ ಟಾಟಾ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ 2008ರಲ್ಲಿ ಪದ್ಮವಿಭೂಷಣ ಪ್ರಶಸಿ ನೀಡಲಾಗಿತ್ತು.
ಯಶಸ್ವಿ ಉದ್ಯಮಿ: ಟಾಟಾ ಸ್ಟೀಲ್​, ಟಾಟಾ ಮೋಟಾರ್ಸ್​, ಟಾಟಾ ಪವರ್​, ಟಾಟಾ ಕನ್ಸಲ್ಟೆನ್ಸಿ ಸವೀಸಸ್​, ಟಾಟಾ ಟೀ, ಟಾಟಾ ತಂತ್ರಜ್ಞಾನ, ಟಾಟಾ ಟೆಲಿ ಸರ್ವೀಸಸ್​, ಟಾಟಾ ಫೈನಾನ್ಸ್​ ಸೇರಿ ರತನ್​ ಟಾಟಾ ಹಲವು ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದರು.