ಆಂಧ್ರಪ್ರದೇಶ: ಕನ್ನಡ ಚಿತ್ರರಂಗದಿಂದ ಹೆಜ್ಜೆಯಿಟ್ಟು ಇಂದು ಟಾಲಿವುಡ್, ಬಾಲಿವುಡ್ನಲ್ಲಿ ಅಪಾರ ಯಶಸ್ಸನ್ನು ನೋಡಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಸ್ಟಾರ್ ನಿರ್ದೇಶಕರ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಪ್ರಸ್ತುತ 'ಪುಷ್ಪಾ 2' ಚಿತ್ರದಲ್ಲಿ ಅಲ್ಲು ಅರ್ಜುನ್ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ರಶ್ಮಿಕಾ, ಚಿತ್ರೀಕರಣದ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇನ್ನು ಈ ಚಿತ್ರ ಇದೇ ಆಗಸ್ಟ್ 15ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ನಿನ್ನೆಯಷ್ಟೇ 'ಗಂ ಗಂ ಗಣೇಶ' ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಪಾಲ್ಗೊಂಡ ರಶ್ಮಿಕಾ, ನನಗೆ ಹೆಸರಾಂತ ನಿರ್ದೇಶಕ ಸಾಯಿ ರಾಜೇಶ್ ಅವರೊಂದಿಗೆ ಕೆಲಸ ಮಾಡುವ ಹಂಬಲವಿದೆ. ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ನಾನು ನಟಿಸಬೇಕು ಎಂಬ ಆಸೆಯಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ ಪುಷ್ಟಿ, ಸಾಯಿ ರಾಜೇಶ್ ನಿರ್ದೇಶನದ ತೆಲುಗಿನ ಬ್ಲಾಕ್ಬಸ್ಟರ್ 'ಬೇಬಿ' ಸಿನಿಮಾ. ಹೌದು, ಈ ಚಿತ್ರವನ್ನು ನೋಡಿದ ರಶ್ಮಿಕಾ, ಚಿತ್ರದ ಕಥೆಯನ್ನು ಪರದೆಯ ಮೇಲೆ ನೋಡಿ, ಕಣ್ಣೀರಿಟ್ಟಿದ್ದರು.
ಈ ಸಿನಿಮಾದಲ್ಲಿನ ಅತ್ಯದ್ಭುತ ಕೆಲಸ ನೋಡಿ ಸಾಯಿ ರಾಜೇಶ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟಿ, ನಿಮ್ಮೊಂದಿಗೆ ಖಂಡಿತ ಒಂದು ಸಿನಿಮಾ ಮಾಡುವ ಆಸೆಯಿದೆ ಎಂದು ಹೇಳಿದ್ದರು. ಸದ್ಯ ರಾಜೇಶ್ ಇದನ್ನು ಹೇಗೆ ಪರಿಗಣಿಸುತ್ತಾರೆ? ರಶ್ಮಿಕಾ ಅವರಿಗೆ ಹೊಸ ಪಾತ್ರವನ್ನು ರೂಪಿಸಲಿದ್ದಾರಾ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).