ನ್ಯೂಸ್

ಪ್ರಧಾನಿ ಎಂದು ಘೋಷಿಸಿದ ಬಳಿಕ ಕೈಲಾಸ ದೇಶ, ನಿತ್ಯಾನಂದನ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ ರಂಜಿತ!

ನವದೆಹಲಿ: ಅತ್ಯಾಚಾರ ಹಾಗೂ ದೇಣಿಗೆ ಸಂಗ್ರಹಕ್ಕೆ ಮಕ್ಕಳನ್ನು ಬಳಸಿಕೊಂಡಿರುವ ಕೇಸಿನಲ್ಲಿ ಬಂಧನದ ಭೀತಿಯಿಂದ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಕೈಲಾಸ ಎಂಬ ಸ್ವಂತ ದೇಶವನ್ನು ರಚಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೀಗ ಆ ದೇಶಕ್ಕೆ ನಟಿ ರಂಜಿತಾ ಪ್ರಧಾನಿಯಾಗಿರುವ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಇದೇ ಮೊದಲ ಬಾರಿಗೆ ರಂಜಿತಾ ಕೈಲಾಸ ದೇಶದ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ್ದಾರೆ.

ಕೈಲಾಸ ಸಮಾನತೆಯ ಅಭಯಾರಣ್ಯ 

ಕೈಲಾಸವು ಮಹಿಳಾ ಸಬಲೀಕರಣ ಮತ್ತು ಸಮಾನತೆಯ ಅಭಯಾರಣ್ಯ ಎಂದು ಹೊಗಳಿದ್ದಾರೆ. ಮಹಿಳೆಯರಿಗೆ ಕೈಲಾಸ ಸ್ವರ್ಗವಾಗಿದೆ. ಮಹಿಳೆಯರ ಪ್ರಗತಿ, ಸಬಲೀಕರಣ ಮತ್ತು ಆಡಳಿತದಲ್ಲಿ ಸಮಾನ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಕೈಲಾಸ ದೇಶದ ಉದ್ದೇಶವಾಗಿದೆ ಎಂದು ನಿತ್ಯಾನಂದನ ಪರಮ ಶಿಷ್ಯೆಯಾಗಿರುವ ರಂಜಿತಾ ಕೈಲಾಸ ದೇಶಕ್ಕೆ ಭೇಟಿ ನೀಡಿದ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಯುಟೋಪಿಯನ್ ರಾಷ್ಟ್ರವನ್ನು ರೂಪಿಸುತ್ತಾರೆ 

ಕೈಲಾಶದಲ್ಲಿ ಲಿಂಗ ಸಮಾನತೆ ಕಡೆಗೆ ಇರುವ ಅದರ ಬದ್ಧತೆಯನ್ನು ರಂಜಿತಾ ತಿಳಿಸಿದ್ದಾರೆ. ವಿಶ್ವದಾದ್ಯಂತ ಇರುವ ಹಿಂದುಗಳಿಗೆ ಕೈಲಾಸ ಒಂದು ಭರವಸೆಯಾಗಿದೆ. ಮೊದಲ ಹಿಂದು ರಾಷ್ಟ್ರ ಎಂದು ಪರಿಕಲ್ಪನೆಯೊಂದಿಗೆ ನಿರ್ಮಾಣವಾಗಿದೆ. ಜೀವನವನ್ನು ಗೌರವಿಸುವ, ಶಿಕ್ಷಣವನ್ನು ಗೌರವಿಸುವ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಾಮರಸ್ಯದ ಸಮಾಜದ ಭರವಸೆಗಳಿಂದ ಆಕರ್ಷಿತರಾದ ಜನರು ಕೈಲಾಸಕ್ಕೆ ವಲಸೆ ಹೋಗುತ್ತಿದ್ದಾರೆ. ಈ ರಾಷ್ಟ್ರದ ಸಂಸ್ಥಾಪಕ ಸ್ವಾಮಿ ನಿತ್ಯಾನಂದ ಅವರು ಪ್ರಕೃತಿಯೊಂದಿಗೆ ಪರಸ್ಪರ ಸಾಮರಸ್ಯದಿಂದ ಬದುಕುವ ಯುಟೋಪಿಯನ್ ರಾಷ್ಟ್ರವನ್ನು ರೂಪಿಸುತ್ತಾರೆ ಎಂದು ರಂಜಿತಾ ಹೇಳಿದ್ದಾರೆ.

ಮಹಿಳೆಯರಿಗೆ ಶೇ. 33 ಮೀಸಲಾತಿ

ಉಚಿತ ಶಿಕ್ಷಣವು ಕೈಲಾಸದ ಅಡಿಪಾಯದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ಇಲ್ಲಿ ಜ್ಞಾನವು ಹಕ್ಕಾಗಿದೆ ಹೊರತು ಅದು ಸವಲತ್ತು ಅಲ್ಲ. ಎಲ್ಲರನ್ನು ಒಳಗೊಂಡಂತೆ ಶಿಕ್ಷಣ ನೀಡಲಾಗುತ್ತದೆ. ಎಲ್ಲ ಜೀವಿಗಳ ಕಡೆಗೆ ಇಲ್ಲಿ ಸಹಾನುಭೂತಿಯನ್ನು ತೋರಲಾಗುತ್ತದೆ. ಪ್ರಾಣಿ ಹತ್ಯೆಯನ್ನು ನಿಷೇಧಿಸಲಾಗಿದೆ. ಅಹಿಂಸೆ ಮತ್ತು ಜೀವನದ ಗೌರವವನ್ನು ಉತ್ತೇಜಿಸುವಲ್ಲಿ ಕೈಲಾಸ ಪ್ರತಿಫಲಿಸುತ್ತದೆ. ಇಲ್ಲಿ ಮಹಿಳೆಯರನ್ನು ಅಂತಾರಾಷ್ಟ್ರೀಯ ಸಮ್ಮೇಳನಗಳಿಗೆ ಪ್ರತಿನಿಧಿಗಳಾಗಿ ಕಳುಹಿಸಲಾಗುತ್ತದೆ. ಯಾವುದೇ ದೇಶವು ಅನುಸರಿಸದ ಪೂರ್ವನಿದರ್ಶನವನ್ನು ಇಲ್ಲಿ ಅನುಸರಿಸಲಾಗುತ್ತದೆ. ಇದಲ್ಲದೆ, ಕೈಲಾಸದ ಆಡಳಿತದ ಎಲ್ಲ ವಿಭಾಗಗಳಲ್ಲೂ ಮಹಿಳೆಯರಿಗೆ ಗಮನಾರ್ಹವಾದ 33 ಪ್ರತಿಶತ ಮೀಸಲಾತಿಯನ್ನು ನಿತ್ಯಾನಂದ ಘೋಷಿಸಿದ್ದಾರೆ ಎಂದು ರಂಜಿತಾ ಹೇಳಿದ್ದಾರೆ.

ಮಹಿಳೆಯರಿಗೆ ಅಧಿಕಾರ

ಇಂದು ಕೈಲಾಸದ ಶೇ. 98ರಷ್ಟು ಜವಾಬ್ದಾರಿಯನ್ನು ಮಹಿಳೆಯರೇ ಹೊತ್ತಿದ್ದಾರೆ. ಇದು ಮಹಿಳೆಯರಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಈ ಲಿಂಗ ಸಮತೋಲನವು ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮುರಿಯಲು ಮತ್ತು ಸಾಮರ್ಥ್ಯ ಹಾಗೂ ದೃಷ್ಟಿಕೋನದೊಂದಿಗೆ ಮುನ್ನಡೆಸಲು ಮಹಿಳೆಯರಿಗೆ ಅಧಿಕಾರ ನೀಡುತ್ತದೆ ಎಂದು ಕೈಲಾಸದ ಬಗ್ಗೆ ರಂಜಿತಾ ಹೊಗಳಿದ್ದಾರೆ.

ಯಾವುದೇ ಉದ್ದೇಶವಿಲ್ಲ

ನಾನು 2009ರಲ್ಲಿ ಸ್ವಾಮಿ ನಿತ್ಯಾನಂದರನ್ನು ಭೇಟಿಯಾಗಿದ್ದೆ. ನನ್ನನ್ನು ನೋಡಿ ಅವರು ಮುಗುಳ್ನಕ್ಕರು. ಎಲ್ಲರೊಂದಿಗೆ ಮಾತನಾಡಿದರು. ಅವರಿಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಹಣ ಅಥವಾ ವಸ್ತುಗಳನ್ನು ಗಳಿಸುವ ಯಾವುದೇ ಉದ್ದೇಶವಿಲ್ಲ. ಕೈಲಾಸವು ಯಾವಾಗಲೂ ಮಹಿಳೆಯರ ಪ್ರಗತಿಗೆ ಆದ್ಯತೆ ನೀಡುತ್ತದೆ ಎಂದು ರಂಜಿತಾ ತಿಳಿಸಿದ್ದಾರೆ. (ಏಜೆನ್ಸೀಸ್​)