Betting Apps : ಸಾಮಾಜಿಕ ಜಾಲತಾಣದಲ್ಲಿ ಬೆಟ್ಟಿಂಗ್ ಆ್ಯಪ್ಗಳನ್ನು ಪ್ರಚಾರ ಮಾಡುತ್ತಿರುವವರ ವಿರುದ್ಧ ಹೈದರಾಬಾದ್ ಪೊಲೀಸರು ಸಮರ ಸಾರಿದ್ದಾರೆ. ಟಾಲಿವುಡ್ ನಟ-ನಟಿಯರು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳು ಹಾಗೂ ಕಿರುತೆರೆ ಕಲಾವಿದರ ವಿರುದ್ಧ ಸರಣಿ ಪ್ರಕರಣಗಳು ದಾಖಲಾಗುತ್ತಿವೆ.
ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿನಯ್ ಎಂಬ ವ್ಯಕ್ತಿ ಮಾರ್ಚ್ 17ರಂದು ಪಂಜಾಗುಟ್ಟ ಪೊಲೀಸರಿಗೆ ದೂರು ನೀಡಿದ್ದರು. ಇದರ ಆಧಾರದ ಮೇಲೆ, ಈಗಾಗಲೇ ಕೆಲವು ಯೂಟ್ಯೂಬರ್‌ಗಳು ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ತನಿಖೆಯನ್ನೂ ಆರಂಭಿಸಲಾಗಿದೆ.
ಇತ್ತೀಚೆಗೆ, ಪೊಲೀಸರು ಟಾಲಿವುಡ್‌ನ ಟಾಪ್ ಹೀರೋಗಳು ಮತ್ತು ನಟರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಟಾಲಿವುಡ್ ಸ್ಟಾರ್ ಹೀರೋಗಳಾದ ವಿಜಯ್ ದೇವರಕೊಂಡ ಮತ್ತು ರಾಣಾ ದಗ್ಗುಬಾಟಿ, ಹಾಗೆಯೇ ನಟಿಯರಾದ ಲಕ್ಷ್ಮಿ ಮಂಚು ಮತ್ತು ನಿಧಿ ಅಗರ್ವಾಲ್ ವಿರುದ್ಧ ಸೈಬರಾಬಾದ್ ಕಮಿಷನರೇಟ್ ವ್ಯಾಪ್ತಿಯ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಟ ಪ್ರಕಾಶ್ ರಾಜ್, ನಾಯಕಿಯರಾದ ಪ್ರಣೀತಾ, ಅನನ್ಯ ನಾಗಲ್ಲ, ಕಿರುತೆರೆ ನಟರಾದ ಸಿರಿ ಹನುಮಂತು, ಶ್ರೀಮುಖಿ, ವಂಶಿ ಸೌಂದರ್ಯ ರಾಜನ್, ವಸಂತ ಕೃಷ್ಣ, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಐ ಪಾಂಡು, ಪದ್ಮಾವತಿ, ಐ ಪಾಂಡು ಹಾಗೂ ನಿರೂಪಕಿ ಶ್ಯಾಮಲಾ ಸೇರಿದಂತೆ ಒಟ್ಟು 25 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಹೇಗೆ ಮಲಗುತ್ತಾರೆ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ! Sunita Williams
ಈ ಪ್ರಕರಣದ ತನಿಖೆಯ ಭಾಗವಾಗಿ ನಟಿ ವಿಷ್ಣುಪ್ರಿಯಾ ಈಗಾಗಲೇ ಪಂಜಗುಟ್ಟ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆ ಎದುರಿಸಿದ್ದಾರೆ. ತಮ್ಮ ವಕೀಲರೊಂದಿಗೆ ತೆರಳಿದ್ದ ವಿಷ್ಣುಪ್ರಿಯಾರನ್ನು ಹೈದರಾಬಾದ್ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಇನ್ನಿತರ ಕಲಾವಿದರಿಗೂ ಪೊಲೀಸರು ಶೀಘ್ರದಲ್ಲಿ ನೋಟಿಸ್ ಕಳುಹಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಿದ್ದಾರೆ.
ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಸುಲಭವಾಗಿ ಹಣ ಗಳಿಸಬೇಕೆಂಬ ಆಸೆ ಇದೆ. ಒಮ್ಮೆಲೇ ಲಕ್ಷ ಲಕ್ಷ ಗಳಿಸುವ ಆಸೆಯಿಂದ ಆನ್‌ಲೈನ್ ಗೇಮ್ಗಳಿಗೆ ಅಡಿಕ್ಟ್ ಆಗಿ ತಮ್ಮ ಅಮೂಲ್ಯ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಜನರು ಕ್ರಿಕೆಟ್ ಬೆಟ್ಟಿಂಗ್, ರಮ್ಮಿ, ಪಬ್ಜಿಯಂತಹ ಆನ್‌ಲೈನ್ ಆಟಗಳ ಬಲೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ಕೆಲ ಕುಟುಂಬಗಳು ಬೀದಿ ಪಾಲಾಗಿವೆ. ಅಲ್ಲದೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಪ್ರಾಣ ಕಳೆದುಕೊಳ್ಳುವಂತ ಸ್ಥಿತಿಯು ನಿರ್ಮಾಣವಾಗಿದೆ. ಇಂತಹ ಆ್ಯಪ್ಗಳಿಗೆ ಪ್ರಚಾರ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಬ ವ್ಯಾಪಕ ಕೂಗು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಸಮರ ಸಾರಿದ್ದಾರೆ. (ಏಜೆನ್ಸೀಸ್)