ನವದೆಹಲಿ: ಮೂವತ್ತ ಮೂರು ವರ್ಷಗಳ ಬಳಿಕ ಕೂಡ ರಾಮಾಯಣ ಧಾರಾವಾಹಿ ಕಡೆಗಿನ ಸೆಳೆತ ಎಳ್ಳಷ್ಟೂ ಕಡಿಮೆಯಾಗಿಲ್ಲ. ಭಾರತ ಕಿರುತೆರೆ ಇತಿಹಾಸದಲ್ಲಿ ಯಾರಿಗೂ ಸಾಧ್ಯವಾಗದ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಮುನ್ನುಗ್ಗುತ್ತಿದೆ ರಾಮಾಯಣ ಧಾರಾವಾಹಿ. ಇದೀಗ ಈ ಕಿರುತೆರೆ ಧಾರಾವಾಹಿ ಜಗತ್ತಿನಲ್ಲೇ ಅತ್ಯಧಿಕ ಮಂದಿ ವೀಕ್ಷಿಸಿದ ಕಾರ್ಯಕ್ರಮವಾಗಿ ವಿಶ್ವ ದಾಖಲೆ ಸೃಷ್ಟಿಸಿತ್ತು.
ರಮನಾಂದ ಸಾಗರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಪೌರಾಣಿಕ ಧಾರಾವಾಹಿ ‘ರಾಮಾಯಣ’ವನ್ನು ಡಿಡಿ ನ್ಯಾಷನಲ್ ವಾಹಿನಿ ಫೆಬ್ರುವರಿ 5ರಿಂದ ಮತ್ತೆ ಪ್ರಸಾರ ಮಾಡುತ್ತಿದೆ. ಪ್ರತಿದಿನ ಸಂಜೆ 6 ಗಂಟೆಗೆ ಹಾಗೂ ಮರುದಿನ ಮಧ್ಯಾಹ್ನ 12 ಗಂಟೆಗೆ ಪ್ರಸಾರ ಮಾಡುವುದಾಗಿ ದೂರದರ್ಶನ ವಾಹಿನಿ ಟ್ವೀಟ್ ಮಾಡಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದೆ.
ಧರ್ಮ, ಪ್ರೀತಿ ಮತ್ತು ಸಮರ್ಪಣಾ ಭಾವದ ಅನನ್ಯ ಸಾಹಸಗಾಥೆ... ಮತ್ತೊಮ್ಮೆ ಇಡೀ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ರಾಮಾಯಣ' ಬರಲಿದೆ ಎಂದು ಡಿಡಿ ನ್ಯಾಷನಲ್ ಎಕ್ಸ್‌ನಲ್ಲಿ ತಿಳಿಸಿದೆ.
80 ಮತ್ತು 90 ರ ದಶಕದಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ, ಶ್ರೀರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಾಲಿಯಾ ಮತ್ತು ಸಹೋದರ ಲಕ್ಷ್ಮಣನಾಗಿ ಸುನಿಲ್ ಲಹ್ರಿ ಕಾಣಿಸಿಕೊಂಡಿದ್ದಾರೆ. ದೇಶದಾದ್ಯಂತ ಜನಮನ್ನಣೆಯನ್ನೂ ಈ ಧಾರಾವಾಹಿ ಗಳಿಸಿತ್ತು.
ಕೊರೊನಾ ಲಾಕ್‌ಡೌನ್ ವೇಳೆಯೂ ರಾಮಾಯಣ ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು. ಆಗಲೂ ಲಕ್ಷಾಂತರ ಜನರು ವೀಕ್ಷಿಸಿ ಜನಪ್ರಿಯತೆ ಪಡೆದುಕೊಂಡಿತ್ತು.