ಕಾಂಟ್ರವರ್ಸಿಯಲ್ ನಿರ್ದೇಶಕ ಎಂದೇ ಖ್ಯಾತಿ ಪಡೆದಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನೈಜ ಘಟನೆಗಳನ್ನು ಆಧರಿಸಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಸಾಕಷ್ಟು ವಿವಾದಗಳನ್ನೂ ಮೈ ಮೇಲೆ ಎಳೆದುಕೊಂಡಿದ್ದಾರೆ. ಇದೀಗ ಫಾರ್ ಎ ಚೇಂಜ್ ಎಂಬಂತೆ ಸ್ವತಃ ರಾಮ್ ಗೋಪಾಲ್ ವರ್ಮಾ ತಮ್ಮದೆ ಬಯೋಪಿಕ್ ತೆರೆಮೇಲೆ ತರಲು ತಯಾರಿ ನಡೆಸಿದ್ದಾರೆ. ದೊರಸಾಯಿ ತೇಜ ಈ ಬಯೋಪಿಕ್ ನಿರ್ದೇಶನ ಮಾಡಲಿದ್ದಾರೆ.
ಹೌದು, ಈ ವಿಚಾರವನ್ನು ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಆರ್ಜಿವಿ, ಒಟ್ಟು ಮೂರು ಭಾಗಗಳಲ್ಲಿ ತಮ್ಮ ಜೀವನವನ್ನು ತೆರೆಮೇಲೆ ತರಲಿದ್ದಾರಂತೆ. ಅಂದಹಾಗೆ, ಆರ್ಜಿವಿ ಜೀವನದ ಪ್ರಮುಖ ಘಟ್ಟಗಳನ್ನು ಮೂರು ಪಾರ್ಟ್ ಮೂಲಕ ತೋರಿಸಲಿದ್ದು, ಒಂದೊಂದು ಭಾಗ ಎರಡು ಗಂಟೆಯದ್ದಾಗಿರಲಿದೆಯಂತೆ.
20 ವಯಸ್ಸಿನ ಆರ್ಜಿವಿಯಾಗಿ ನವ ನಟ ನಟಿಸಲಿದ್ದಾರೆ. 2ನೇ ಭಾಗದಲ್ಲಿ ಓರ್ವ ನಟ ಪಾತ್ರ ನಿರ್ವಹಿಸಲಿದ್ದಾರೆ. ಅದೇ ರೀತಿ ಮೂರನೇ ಭಾಗದಲ್ಲಿ ನಾನೇ ಕಾಣಿಸಿಕೊಳ್ಳಲಿದ್ದೇನೆ. ಮೊದಲ ಭಾಗ ರಾಮು, ಎರಡನೇ ಭಾಗ ರಾಮ್ ಗೋಪಾಲ್ ವರ್ಮಾ ಮತ್ತು ಮೂರನೇ ಭಾಗವಾಗಿ ಆರ್ಜಿವಿ ಎಂಬ ಶೀರ್ಷಿಕೆ ಇರಲಿದೆ’ ಎಂದಿದ್ದಾರೆ.
ಇದನ್ನೂ ಓದಿ: ಅಂಬರದತ್ತ ಪೃಥ್ವಿ: ಇದು ‘ದಿಯಾ’ ಚಿತ್ರ ಕೊಟ್ಟ ಗಿಫ್ಟ್
ಎರಡನೇ ಭಾಗದಲ್ಲಿ ಮುಂಬೈ ಜೀವನ, ಗ್ಯಾಂಗಸ್ಟರ್ಗಳ ಜತೆ ಒಡನಾಟ, ಹುಡುಗಿಯರ ಸಾಂಗತ್ಯ ಮತ್ತು ಅಮಿತಾಬ್ ಬಚ್ಚನ್ ಅವರೊಟ್ಟಿಗಿನ ಕಥೆ ಸಿನಿಮಾದಲ್ಲಿರಲಿದೆಯಂತೆ. ಮೂರನೇ ಭಾಗದಲ್ಲಿ ಸೋಲು, ಸೆಕ್ಸ್ ಮತ್ತು ಸಮಾಜದ ಬಗ್ಗೆ ಜಾಣ ಮೂರ್ಖನ ಕಲ್ಪನೆಗಳನ್ನು ಬಿತ್ತಲಿದ್ದಾರಂತೆ.
ಹಾಗಾದರೆ, ನಿರ್ದೇಶಕರು ಯಾರು, ಕಲಾವಿದರು ಯಾರೆಲ್ಲ ಇರಲಿದ್ದಾರೆ. ಇದೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದಾರಂತೆ ಆರ್ಜಿವಿ (ಏಜೆನ್ಸೀಸ್)