ಅಂಬರದತ್ತ ಪೃಥ್ವಿ: ಇದು ‘ದಿಯಾ’ ಚಿತ್ರ ಕೊಟ್ಟ ಗಿಫ್ಟ್

Pruthvi Amber (7)
Published on

ಬೆಂಗಳೂರು: ಕಳೆದ ವಾರ ‘ಶುಗರ್​ಲೆಸ್’, ಈ ವಾರ ‘ಲೈಫ್ ಈಸ್ ಬ್ಯೂಟಿಫುಲ್’, ಮುಂದಿನ ವಾರ? ‘ಸದ್ಯ ಗೊತ್ತಿಲ್ಲ’ ಎಂದು ನಗುತ್ತಾರೆ ಪೃಥ್ವಿ ಅಂಬರ್. ಈ ಎರಡಲ್ಲದೆ, ಅವರ ಕೈಯಲ್ಲಿ ಇನ್ನೂ ಮೂರು ಚಿತ್ರಗಳಿವೆಯಂತೆ. ಅವೆಲ್ಲವೂ ಮುಂದಿನ ದಿನಗಳಲ್ಲಿ ಒಂದರಹಿಂದೊಂದು ಕ್ರಮೇಣ ಶುರುವಾಗಲಿದೆ. ವಿಶೇಷವೆಂದರೆ, ಇವೆಲ್ಲಾ ‘ದಿಯಾ’ ಚಿತ್ರ ಕೊಟ್ಟ ಗಿಫ್ಟ್ ಎಂದರೆ ತಪ್ಪಿಲ್ಲ.

ಫೆಬ್ರವರಿಯಲ್ಲಿ ಬಿಡುಗಡೆಯಾಯ್ತು ‘ದಿಯಾ’. ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದರೂ, ಚಿತ್ರಮಂದಿರಗಳಲ್ಲಿ ಹೆಚ್ಚು ದಿನ ನಿಲ್ಲಲಿಲ್ಲ. ಈ ಮಧ್ಯೆ ಲಾಕ್​ಡೌನ್ ಆಗಿ, ಚಿತ್ರಮಂದಿರಗಳೇ ಬಂದ್ ಆದವು. ಆ ಸಂದರ್ಭಲ್ಲಿ ಚಿತ್ರ ಅಮೇಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾಯಿತು. ಅಲ್ಲಿ ಅದೆಷ್ಟು ಯಶಸ್ವಿಯಾಯಿತು ಎಂದರೆ, ಈ ಐದು ತಿಂಗಳುಗಳಲ್ಲಿ, ಐದು ಚಿತ್ರಗಳಿಗೆ ಪೃಥ್ವಿ ನಾಯಕನಾಗಿ ಆಯ್ಕೆಯಾಗಿದ್ದಾರೆ.

ನನಗೂ ಅದೇ ಬೇಕಿತ್ತು: ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಪೃಥ್ವಿ, ‘ಇಷ್ಟು ದಿನಗಳಲ್ಲಿ ಹಲವು ಕಥೆಗಳನ್ನು ಕೇಳಿದ್ದೀನಿ. ಈ ಪೈಕಿ ‘ಶುಗರ್​ಲೆಸ್’, ‘ಲೈಫ್ ಈಸ್ ಬ್ಯೂಟಿಫುಲ್’, ‘ಫಾರ್ ರಿಜಿಸ್ಟ್ರೇಶನ್’ ಸೇರಿದಂತೆ ಐದು ಚಿತ್ರಗಳನ್ನ ಒಪ್ಪಿಕೊಂಡಿದ್ದೇನೆ. ಖುಷಿ ವಿಷಯ ಅಂದ್ರೆ, ನಟನೆಗೆ ಸ್ಕೋಪ್ ಇರುವ ಪಾತ್ರಗಳು ಸಿಗುತ್ತಿವೆ. ‘ದಿಯಾ’ ಹಿಟ್ ಆಯ್ತು ಎಂಬ ಕಾರಣಕ್ಕೆ ಅದೇ ತರಹದ ಪಾತ್ರಗಳು ಬರುತ್ತಿಲ್ಲ. ಅದಕ್ಕಿಂತ ಕಾಂಟ್ರಾಸ್ಟ್ ಆದಂತಹ ಪಾತ್ರಗಳು ಸಹ ಬರುತ್ತಿವೆ. ನನಗೂ ಅದೇ ಬೇಕಿತ್ತು’ ಎನ್ನುತ್ತಾರೆ ಪೃಥ್ವಿ.

ಈಗ ಜನ ಗುರುತಿಸ್ತಾರೆ: ಈ ಐದು ತಿಂಗಳುಗಳಲ್ಲಿ ಪೃಥ್ವಿ ಐದು ಚಿತ್ರಗಳನ್ನು ಒಪ್ಪಿಕೊಂಡಿರಬಹುದು. ಆದರೆ, ಅದಕ್ಕೂ ಮುನ್ನ ಒಂದೇ ಒಂದು ಚಿತ್ರಕ್ಕೆ ಅವರು ಆರು ವರ್ಷ ಕಾದಿದ್ದೂ ಇದೆಯಂತೆ. ‘ಆರು ವರ್ಷಗಳ ಹಿಂದೆ ‘ದಿಯಾ’ ಚಿತ್ರಕ್ಕೆ ಆಡಿಷನ್ ಕೊಟ್ಟೆ. ಆಯ್ಕೆಯೂ ಆದೆ. ಆದರೆ, ಕಾರಣಾಂತರಗಳಿಂದ ಚಿತ್ರ ತಡವಾಗುತ್ತಾ ಹೋಯಿತು. ಕೊನೆಗೆ ಈ ವರ್ಷ ಬಿಡುಗಡೆಯಾಯಿತು. ಇಷ್ಟು ವರ್ಷ ಕಾದಿದ್ದಿಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗಬಹುದು ಎಂದುಕೊಂಡಿದ್ದೆ. ಆದರೆ, ಚಿತ್ರಮಂದಿರಗಳಲ್ಲಿ ಚಿತ್ರ ಹೆಚ್ಚು ದಿನ ಓಡಲಿಲ್ಲ. ಈ ಬೇಸರದಲ್ಲಿದ್ದಾಗಲೇ, ಚಿತ್ರ ಅಮೇಜಾನ್​ನಲ್ಲಿ ಬಿಡುಗಡೆಯಾಗಿ ಯಶಸ್ವಿ ಆಯ್ತು. ಅದಕ್ಕೂ ಮುನ್ನ, ನಾನು ಯಾರು ಅಂತ ಯಾರಿಗೂ ಗೊತ್ತಿರಲಿಲ್ಲ. ಈಗ ಜನ ಗುರುತಿಸ್ತಾರೆ, ಒಳ್ಳೆಯ ಅವಕಾಶಗಳೂ ಸಿಗುತ್ತಿವೆ. ಇದೇ ಖುಷಿಯ ವಿಚಾರ’ ಎನ್ನುತ್ತಾರೆ ಫೃಥ್ವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net