ನ್ಯೂಸ್

ಗದ್ದಲ ನಡೆಸಿದ ಕಾಂಗ್ರೆಸ್ ಸಂಸದರಿಗೆ ಸಭಾಪತಿ ಧನಕರ್ ತರಾಟೆ; ನೀವು ಕೇವಲ ರಾಜಕೀಯ ಮಾಡುತ್ತಿದ್ದೀರಿ ಎಂದು ಟೀಕೆ

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ಮತ್ತು ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಹೆಚ್ಚಿಸುವ ಭರವಸೆ ಈಡೇರಿಸದ ಕಾರಣಕ್ಕೆ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಂಸದರು ಬುಧವಾರ ಸಂಸತ್ ಕಲಾಪ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.

ದಿನದ ನಿಗದಿತ ವ್ಯವಹಾರವನ್ನು ಬದಿಗಿರಿಸಿ, ರೈತರ ಸಮಸ್ಯೆಗಳ ಕುರಿತು ರ್ಚಚಿಸಲು ಅನುಮತಿ ನೀಡಬೇಕು ಎಂದು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಕಾಂಗ್ರೆಸ್ ಸಂಸದರು ಆಗ್ರಹಿಸಿದರು. ಇದಕ್ಕೆ ಕಟುವಾಗಿ ಪ್ರತಿಕ್ರಿಯೆ ನೀಡಿದ ಧನಕರ್, ರೈತರ ಹಿತಾಸಕ್ತಿ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ. ನೀವು ಕೇವಲ ರಾಜಕೀಯ ಮಾಡುತ್ತಿದ್ದೀರಿ. ನಿಮಗೆ ಪರಿಹಾರ ಬೇಡ. ರೈತರು ನಿಮ್ಮ ಕೊನೆಯ ಆದ್ಯತೆ ಎಂದು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ಸಂಸದರು ಘೊಷಣೆ ಕೂಗುತ್ತಿರುವ ನಡುವೆಯೇ ಸಭಾಪತಿ ಶೂನ್ಯವೇಳೆ ಪ್ರಸ್ತಾಪವನ್ನು ಕೈಗೆತ್ತಿಕೊಂಡರು. ವಿರೋಧ ಪಕ್ಷದ ಸಂಸದರಿಗೆ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ. ಎಂಎಸ್​ಪಿ ಹೆಚ್ಚಿಸುವ ಭರವಸೆಯನ್ನು ಸರ್ಕಾರ ಉಳಿಸಿಕೊಂಡಿಲ್ಲ. ಇದರಿಂದ ರೈತರು ಮತ್ತೆ ಆಂದೋಲನ ಆರಂಭಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದರು.

ಆರೋಗ್ಯ ವಿಮೆ ಕ್ಲೇಮ್ ನ್ಯಾಯಯುತವಾಗಲಿ: ಖಾಸಗಿ ಆರೋಗ್ಯ ವಿಮೆ ಅವಲಂಬಿಸಿರುವ ನಾಗರಿಕರಿಗೆ ನ್ಯಾಯಯುತವಾದ ಕ್ಲೇಮ್ ಲಭ್ಯವಾಗುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬುಧವಾರ ಒತ್ತಾಯಿಸಿದ್ದಾರೆ. ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, 15 ಖಾಸಗಿ ಆರೋಗ್ಯ ವಿಮಾ ಕಂಪನಿಗಳ ಪೈಕಿ ಕೇವಲ ಮೂರು ಕಂಪನಿಗಳಲ್ಲಿ ಕ್ಲೇಮ್ ಪ್ರಮಾಣ ಶೇ. 75ಕ್ಕಿಂತ ಹೆಚ್ಚಿದೆ. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಕೆಲವು ವಿಮಾ ಪೂರೈಕೆದಾರರು ಕ್ಲೇಮ್ ಮಾಡಿದ ಮೊತ್ತದ ಶೇ. 60ಕ್ಕಿಂತ ಕಡಿಮೆ ಹಣವನ್ನು ಪಾವತಿಸಿದ್ದಾರೆ. ಆರೋಗ್ಯ ವಿಮೆ ಕ್ಲೇಮ್ಳನ್ನು ಸಮಯಕ್ಕೆ ಸರಿಯಾಗಿ ಇತ್ಯರ್ಥಪಡಿಸಲು ಮತ್ತು ಮಧ್ಯಮ ವರ್ಗದವರನ್ನು ರಕ್ಷಿಸಲು ಹಣಕಾಸು ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಮುಖ್ಯಾಂಶಗಳು

  • ರೈಲ್ವೆ ಖಾಸಗೀಕರಣಗೊಳಿಸಬಾರದು ಮತ್ತು ಹಿರಿಯ ನಾಗರಿಕರಿಗೆ ರಿಯಾಯಿತಿಯನ್ನು ಮರುಸ್ಥಾಪಿಸಬೇಕು ಎಂದು ಪ್ರತಿಪಕ್ಷ ಸದಸ್ಯರ ಒತ್ತಾಯ. ರೈಲ್ವೆ (ತಿದ್ದುಪಡಿ) ಮಸೂದೆ 2024ಯನ್ನು ಸರ್ವಪಕ್ಷಗಳ ಸಮಿತಿಗೆ ನೀಡಲು ಆಗ್ರಹ
  • ರೈಲ್ವೆ ಕಾಯಿದೆ 1989ರಲ್ಲಿನ ಕಾನೂನು ಚೌಕಟ್ಟನ್ನು ಸರಳೀಕರಿಸುವ ಮಸೂದೆಗೆ ಟಿಡಿಪಿ, ಜನತಾ ದಳ (ಯು) ಮತ್ತು ಎಲ್​ಜೆಪಿ (ರಾಮ್ ವಿಲಾಸ್) ಸೇರಿದಂತೆ ಎನ್​ಡಿಎ ಮಿತ್ರಪಕ್ಷಗಳಿಂದ ಬಲವಾದ ಬೆಂಬಲ.
  • ದೇಶದ್ರೋಹದ ಆರೋಪದ ಮೇಲೆ ಬಾಂಗ್ಲಾದೇಶದಲ್ಲಿ ಬಂಧನಕ್ಕೊಳಗಾಗಿರುವ ಇಸ್ಕಾನ್ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಬಿಡುಗಡೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದು ಉಜ್ಜಯಿನಿ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಮನವಿ
  • ಗಿಗ್ ಕಾರ್ವಿುಕರಿಗೆ ನ್ಯಾಯಯುತ ವೇತನ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಪ್ರಯೋಜನ ಖಾತ್ರಿಪಡಿಸುವ ಮೂಲಕ ಅವರನ್ನು ರಕ್ಷಿಸಲು ಹೊಸ ಕಾನೂನನ್ನು ಜಾರಿಗೆ ತರಲು ಕಾಂಗ್ರೆಸ್ ಸಂಸದ ಮನ್ನಿಕಮ್ ಟ್ಯಾಗೋರ್ ಬೇಡಿಕೆ
  • ಬಾಯ್ಲರ್​ಗಳ ನಿಯಂತ್ರಣ, ಸ್ಟೀಮ್​ಬಾಯ್ಲರ್ ಸ್ಪೋಟದಿಂದ ಜೀವ ಮತ್ತು ಆಸ್ತಿಯ ಸುರಕ್ಷತೆ ಸಂಬಂಧ ನೋಂದಣಿಯಲ್ಲಿ ಏಕರೂಪತೆ ತರುವ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ