ಉತ್ತರಾಖಂಡ: ತಮಿಳು ಚಿತ್ರರಂಗದ ಸೂಪರ್ಸ್ಟಾರ್, ಅಭಿಮಾನಿಗಳ 'ತಲೈವಾ' ರಜಿನಿಕಾಂತ್, ಇದೀಗ ತಮ್ಮ ಮುಂಬರುವ 'ಕೂಲಿ' ಚಿತ್ರೀಕರಣ ಪ್ರಾರಂಭಕ್ಕೂ ಮುನ್ನ ಹಿಮಾಲಯ, ಕೇದರನಾಥ ಮತ್ತು ಬದ್ರಿನಾಥ ದೇವಾಲಯಗಳಿಗೆ ಪ್ರವಾಸ ಕೈಗೊಂಡಿದ್ದು, ಆಧ್ಯಾತ್ಮಿಕ ವಿಶ್ರಾಂತಿಗಾಗಿ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಟ ಪ್ರಯಾಣಿಸುತ್ತಿರುವ ಫೋಟೋ, ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಡೆಹಾರಡೂನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಜಿನಿಕಾಂತ್, "ಪ್ರತಿವರ್ಷ ಈ ರೀತಿ ದೇವಾಲಯ ಪ್ರವಾಸ ಕೈಗೊಳ್ಳುವುದು ನನ್ನ ಆಧ್ಯಾತ್ಮಿಕ ಪಯಣವನ್ನು ಮತ್ತಷ್ಟು ಬಲಪಡಿಸುತ್ತದೆ ಹಾಗೂ ಹೆಚ್ಚಿಸುತ್ತದೆ. ದೇಗುಲಗಳಿಗೆ ಹೋಗುವುದು ನನಗೆ ಹೊಚ್ಚ ಹೊಸ ಅನುಭವಗಳನ್ನು ಕೊಡುತ್ತದೆ. ಈ ಬಾರಿಯ ಪ್ರಯಾಣದಲ್ಲಿ ಖಂಡಿತ ಒಂದು ಹೊಸ ಅನುಭವ ಲಭಿಸುತ್ತದೆ ಎಂದೇ ಭಾವಿಸಿದ್ದೀನಿ" ಎಂದರು.
"ಜೀವನದಲ್ಲಿ ಆಧ್ಯಾತ್ಮಿಕ ಒಲವು ಬಹಳ ಮುಖ್ಯ. ಇಡೀ ಜಗತ್ತಿಗೆ ಇದರ ಅವಶ್ಯಕತೆಯಿದೆ. ಮನುಷ್ಯನಿಗೂ ಸಹ ತುಂಬ ಅಗತ್ಯ. ಆಧ್ಯಾತ್ಮಿಕವಾಗಿರುವುದು ಎಂದರೆ ಶಾಂತಿ ಮತ್ತು ನೆಮ್ಮದಿಯನ್ನು ಅನುಭವಿಸುವುದು ಮತ್ತು ಮೂಲಭೂತವಾಗಿ ದೇವರಲ್ಲಿ ಬಲವಾದ ನಂಬಿಕೆಯನ್ನು ಹೊಂದಿರುವುದು ಎಂದರ್ಥ" ಎಂದು ಹೇಳಿದರು. ಇತ್ತೀಚೆಗಷ್ಟೇ, ಅಬು ಧಾಬಿಯಲ್ಲಿರುವ ಹಿಂದೂ ಮಂದಿರಕ್ಕೆ ಭೇಟಿ ನೀಡಿದ್ದ ತಲೈವಾ, ದೇವರ ದರ್ಶನ ಪಡೆದು ಚೆನ್ನೈಗೆ ಹಿಂತಿರುಗಿದ್ದರು. ಅದರ ಫೋಟೋಸ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು,(ಏಜೆನ್ಸೀಸ್).