ನ್ಯೂಸ್

'ಕೂಲಿ'ಗೆ ಭರ್ಜರಿ ಓಪನಿಂಗ್​! 'ತಲೈವಾ' ಎಂಟ್ರಿಗೆ ಫ್ಯಾನ್ಸ್​ ಥ್ರಿಲ್​, ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮ | Coolie

ಮೋಹನ್​ ಶೆಟ್ಟಿ

Rajinikanth Coolie: ತಮಿಳು ನಟ, ಸೂಪರ್​ಸ್ಟಾರ್​ ರಜಿನಿಕಾಂತ್​​ ಅಭಿನಯದ ಬಹುನಿರೀಕ್ಷಿತ 'ಕೂಲಿ' ಸಿನಿಮಾ ಇಂದು ಭರ್ಜರಿ ಓಪನಿಂಗ್ ಪಡೆದಿದ್ದು, ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಕೇರಳ, ಕರ್ನಾಟಕದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಮೊದಲ ಶೋ ಆರಂಭಗೊಂಡಿದೆ. ಇನ್ನು ತಮಿಳುನಾಡಿನಲ್ಲಿ 9 ಗಂಟೆಯಿಂದ ಫಸ್ಟ್​ ಶೋ ಪ್ರಾರಂಭವಾಗಿದೆ. ತಮ್ಮ ನೆಚ್ಚಿನ ನಟನ ಚಿತ್ರ ರಿಲೀಸ್ ಆಗಿದ್ದೇ ತಡ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಪಟಾಕಿ ಸಿಡಿಸಿ, ಜೈಕಾರ ಹಾಕಿ ಸಂಭ್ರಮಿಸಿದ್ದಾರೆ.

ಒಂದೆಡೆ ರಜಿನಿಕಾಂತ್ ಅವರ ಚಿತ್ರ ರಿಲೀಸ್​ ಆದರೆ, ಮತ್ತೊಂದೆಡೆ, ಆ.13ಕ್ಕೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅವರು 50 ವರ್ಷಗಳನ್ನು ಪೂರೈಸಿದ್ದಾರೆ. ಈ ಎರಡು ವಿಷಯಗಳು ಅಭಿಮಾನಿಗಳಲ್ಲಿ ಖುಷಿಯನ್ನು ದುಪ್ಪಟ್ಟಾಗಿಸಿದ್ದು, ಮೊದಲ ದಿನ ಮೊದಲ ಶೋ ನೋಡುವ ಮೂಲಕ ಸಂಭ್ರಮಿಸಿದ್ದಾರೆ. ಕೂಲಿ ಚಿತ್ರದ ರಿಲೀಸ್ ಬೆನ್ನಲ್ಲೇ ಸಿನಿಮಾ ನೋಡಿದ ಪ್ರೇಕ್ಷಕರು ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಫಸ್ಟ್​ ಆಫ್​ ಸೂಪರ್​: ಟ್ವಿಟರ್ ವಿಮರ್ಶೆ

ಜಾಲತಾಣಗಳಲ್ಲಿ ನಟನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ಲಭಿಸುತ್ತಿದ್ದು, ಆರಂಭಿಕ ಪ್ರತಿಕ್ರಿಯೆಗಳು ಚೆನ್ನಾಗಿಯೇ ಕೇಳಿಬಂದಿವೆ. ಸಿನಿಮಾದ ಮೊದಲಾರ್ಧವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಹಾಗೂ ಎಲ್ಲಿಯೂ ಬೋರ್ ಹೊಡಿಸದಂತೆ ಕರೆದೊಯ್ಯಲಿದೆ. ಲೋಕೇಶ್ ಕನಕರಾಜ್​ ನಿರ್ದೇಶನ ಉತ್ತಮವಾಗಿ ಮೂಡಿಬಂದಿದೆ ಎಂಬ ಅನಿಸಿಕೆಗಳು ವ್ಯಕ್ತವಾಗಿವೆ. ಇದು ಮೊದಲ ದಿನವಾದ ಹಿನ್ನೆಲೆ ಚಿತ್ರ ಮುಂದಿನ ದಿನಗಳಲ್ಲಿ ಹೇಗೆ ಕಮಾಲ್ ಮಾಡಲಿದೆ? ದಾಖಲೆಗಳನ್ನು ಮುರಿಯಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ.

‘ಕೂಲಿ’ ತಾರಾ ಬಳಗ

ಲೋಕೇಶ್ ನಿರ್ದೇಶನದ ಈ ಚಿತ್ರದಲ್ಲಿ ರಜಿನಿಕಾಂತ್, ನಾಗಾರ್ಜುನ, ಕನ್ನಡದ ನಟ ಉಪೇಂದ್ರ, ಬಾಲಿವುಡ್​ ಹೀರೋ ಆಮಿರ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಶ್ರುತಿ ಹಾಸನ್, ಪೂಜಾ ಹೆಗ್ಡೆ (ವಿಶೇಷ ಹಾಡು) ಸೌಬಿನ್ ಶಾಹಿರ್, ರೇಬಾ ಮೋನಿಕಾ ಜಾನ್, ಸತ್ಯರಾಜ್, ರಚಿತಾ ರಾಮ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಆಗಸ್ಟ್ 14ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ,(ಏಜೆನ್ಸೀಸ್).