ನ್ಯೂಸ್

'ಆತ ನನ್ನ ಹಳೆಯ ಗೆಳೆಯ': ಟೀಕಾಪ್ರಹಾರದ ಬಳಿಕ ಡಿಎಂಕೆ ಸಚಿವ ಕುರಿತು ರಜನಿಕಾಂತ್ ಹೀಗೆಂದಿದ್ದೇಕೆ ಗೊತ್ತಾ?

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಡಿಎಂಕೆ ಸಚಿವ ದುರೈ ಮುರುಗನ್ ನಡುವೆ ಇತ್ತೀಚೆಗೆ ನಡೆದ ಮಾತಿನ ಚಕಮಕಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಹಳೆಯ ವಿದ್ಯಾರ್ಥಿಗಳು ಮತ್ತು ಹೊಸ ವಿದ್ಯಾರ್ಥಿಗಳ ಬಗ್ಗೆ ರಜನಿಕಾಂತ್ ಅವರ ಕಾಮೆಂಟ್​ಗಳು ಇದಕ್ಕೆ ಕಾರಣವಾಗಿದ್ದು, ವಿವಾದಕ್ಕೆ ಇಬ್ಬರೂ ಫುಲ್​ಸ್ಟಾಪ್​ ಹಾಕಿದ್ದಾರೆ. ನಾವಿಬ್ಬರೂ ಹಳೆಯ ಗೆಳೆಯರು ಎಂದು ರಜನಿಕಾಂತ್ ಹೇಳಿದ್ದು, ಇದಕ್ಕೆ ದುರೈ ಮುರುಗನ್ ಪ್ರತಿಕ್ರಿಯಿಸಿದ್ದು, ರಜನಿ ಮಾತೇ ನನ್ನ ಮಾತು ಎಂದು ಹೇಳಿದ್ದಾರೆ. ಇದರಿಂದ ಅನಗತ್ಯ ವಾಗ್ಯುದ್ಧ ನಿಂತು ಪರಿಸ್ಥಿತಿ ಶಾಂತವಾಗಿದೆ.

ರಜನಿಕಾಂತ್ ತನ್ನ ಚಿತ್ರ ‘ವೆಟ್ಟೈಯನ್’ಚಿತ್ರದ ಚಿತ್ರೀಕರಣಕ್ಕಾಗಿ ಸೋಮವಾರ ಚೆನ್ನೈನಿಂದ ವಿಜಯವಾಡಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುರುಗುನ್ ಜೊತೆಗಿನ ಬಾಂಧವ್ಯ ಮುಂದುವರೆಯಲಿದ್ದು, ನಾನು ಏನೇ ಹೇಳಿದ್ದರೂ ಅದು ದೊಡ್ಡ ವಿಷಯವಲ್ಲ ಎಂದಿದ್ದಾರೆ. ಇದಕ್ಕೂ ಮುನ್ನ ದುರೈ ಮುರುಗನ್ ಕೂಡ ತಮ್ಮ ನಡುವಿನ ಗೆಳೆತನವನ್ನು ನೆನೆದು ರಜನಿ ಮಾತೇ ನನ್ನ ಮಾತು ಎಂದಿದ್ದಾರೆ. ತಮ್ಮ ನಡುವಿನ ಹಾಸ್ಯವನ್ನು ಯಾರೂ ದ್ವೇಷವೆಂದು ಪರಿಗಣಿಸುವುದಿಲ್ಲ. ಅವರು ಮೊದಲಿನಂತೆ ಈಗಲೂ ಸ್ನೇಹಿತರಾಗಿದ್ದಾರೆ ಎಂದು ಹೇಳಿದ್ದಾರೆ.

ರಜನಿಕಾಂತ್ ಇತ್ತೀಚೆಗೆ ಮಾತನಾಡುವಾಗ, “ನನಗೆ ಒಂದು ವಿಷಯ ಆಶ್ಚರ್ಯವಾಗಿದೆ. ಹೊಸ ವಿದ್ಯಾರ್ಥಿಗಳನ್ನು ನಿಭಾಯಿಸುವುದು ದೊಡ್ಡ ವಿಷಯವಲ್ಲ. ಆದರೆ ಹಳೆಯ ವಿದ್ಯಾರ್ಥಿಗಳನ್ನು (ಡಿಎಂಕೆ ಹಿರಿಯ ನಾಯಕರು) ನಿಭಾಯಿಸುವುದು ಬಹಳ ಕಷ್ಟ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಸಾಮಾನ್ಯ ವಿದ್ಯಾರ್ಥಿಗಳಲ್ಲ. ಅವರೆಲ್ಲರೂ ಅಸಾಧಾರಣ ಹಳೆಯ ವಿದ್ಯಾರ್ಥಿಗಳು. ಎಲ್ಲರೂ ಪ್ರತಿಭಾವಂತರೇ. ಕ್ಲಾಸ್ ಬಿಡೋದಿಲ್ಲ ಅಂತಾರೆ. ಅದರಲ್ಲೂ ದುರೈ ಮುರುಗನ್ ಬಗ್ಗೆ ಏನನ್ನೂ ಹೇಳಲಾರೆವು. ಎಲ್ಲ ವ್ಯವಹಾರಗಳನ್ನು ನಾಜೂಕಾಗಿ ನಡೆಸುತ್ತಿರುವ ಮುಖ್ಯಮಂತ್ರಿ ಸ್ಟಾಲಿನ್ ಗೆ ನನ್ನ ದೊಡ್ಡ ನಮಸ್ಕಾರ ಹೇಳಲೇಬೇಕು ಎಂದು ಮಾರ್ಮಿಕವಾಗಿ ಟಿಕಾಪ್ರಹಾರ ನಡೆಸಿದ್ದರು.

ಡಿಎಂಕೆಯ ಹಿರಿಯ ನಾಯಕರ ಬಗ್ಗೆ ರಜನಿಕಾಂತ್ ಮಾಡಿದ ಕಾಮೆಂಟ್‌ಗಳಿಗೆ ದುರೈ ಮುರುಗುನ್ ಅಷ್ಟೇ ತೀಕ್ಷ್ಣವಾದ ಉತ್ತರ ನೀಡಿ, ಹಲ್ಲು ಉದುರಿದ ಮೇಲೂ ನಟನೆ ಮುಂದುವರಿಸುವ ಹಳೆ ನಟರಿಂದಾಗಿ ಹೊಸ ನಟರು ಅವಕಾಶ ಕಳೆದುಕೊಳ್ಳುತ್ತಿದ್ದಾರೆ ಎಂದು ಪ್ರತಿದಾಳಿ ನಡೆಸಿದ್ದರು.