Rajeev Chandrasekhar: ಕೇರಳದ ಕೊಲ್ಲಂನ ಪಾರ್ಥಸಾರಥಿ ದೇವಸ್ಥಾನದ ಹೊರಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಧ್ವಜ ಮತ್ತು "ಆಪರೇಷನ್ ಸಿಂಧೂರ" ಎಂಬ ಪದಗುಚ್ಛವನ್ನು ಒಳಗೊಂಡ ಹೂವಿನ ಕಾರ್ಪೆಟ್ ಹಾಕಿದ ವಿಷಯವಾಗಿ ಆರ್‌ಎಸ್‌ಎಸ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ವಿರೋಧಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಂದ್ರಶೇಖರ್, ಕೇರಳ ಪೊಲೀಸ್ರ ದಾಖಲಿಸಿರುವ ಎಫ್‌ಐಆರ್ ಅನ್ನು ನಾಚಿಕೆಗೇಡು ಮತ್ತು ದೇಶದ್ರೋಹ ಎಂದಿದ್ದಾರೆ, ಇದು ಸಶಸ್ತ್ರ ಪಡೆಗಳು ಮತ್ತು ಭಯೋತ್ಪಾದನೆಗೆ ಪ್ರಾಣತೆತ್ತವರಿಗೆ ಮಾಡಿದ ಅವಮಾನವಾಗಿದ್ದು, ಪ್ರಕರಣವನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಆಪರೇಷನ್ ಸಿಂಧೂರ ನಮ್ಮ ಹೆಮ್ಮೆ. ಇದು ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಧೈರ್ಯದ ಸಂಕೇತವಾಗಿದೆ. ಧರ್ಮವನ್ನು ಕೇಳಿ ಕೊಲ್ಲಲ್ಪಟ್ಟ 26 ಅಮಾಯಕ ಪ್ರವಾಸಿಗರ ಸಾವಿಗೆ ಸೇಡು ತೀರಿಸಿಕೊಂಡ ಕಾರ್ಯಾಚರಣೆ ಇದು. ಕೇರಳ ಪೊಲೀಸರ ಈ ಎಫ್‌ಐಆರ್, ಭಯೋತ್ಪಾದನೆಗೆ ಬಲಿಯಾದ 26 ಜನರಿಗೆ ಮತ್ತು ಅವರ ಕುಟುಂಬಗಳಿಗೆ ಮತ್ತು ತನ್ನ ರಕ್ತ ಮತ್ತು ತ್ಯಾಗದಿಂದ ಭಾರತವನ್ನು ರಕ್ಷಿಸುವ ಪ್ರತಿಯೊಬ್ಬ ಸೈನಿಕನಿಗೆ ಮಾಡಿದ ಅವಮಾನವಾಗಿದೆ ಎಂದಿದ್ದಾರೆ. ಕೇರಳವು ಜಮಾತ್-ಎ-ಇಸ್ಲಾಮಿ ಅಥವಾ ಪಾಕಿಸ್ತಾನದಿಂದ ಆಳಲ್ಪಡುವ ಭೂಮಿಯಲ್ಲ, ಎಂದಿಗೂ ಹಾಗಾಗಲು ಸಾಧ್ಯವಿಲ್ಲ. ಇದು ಭಾರತ ಎಂಬುದನ್ನು ಕೇರಳ ಪೊಲೀಸರು ಮರೆಯಬಾರದು ಎಂದರು.
ಇದನ್ನೂ ಓದಿ:ಲೋಕ ಬೆಳಗಿಸಿದ ಬೆಳಕು
ಪೂರ್ವ ಸೂಚನೆಗಳ ಹೊರತಾಗಿಯೂ, ಹೂವಿನ ವಿನ್ಯಾಸದಲ್ಲಿ ಆರ್‌ಎಸ್‌ಎಸ್ ಧ್ವಜ ಕಂಡುಬಂದ ನಂತರ ಸಸ್ತಂಕೋಟ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಈ ಪ್ರದೇಶದಲ್ಲಿ ಮೊದಲೇ ಉದ್ವಿಗ್ನತೆ ಉಂಟಾಗಿದ್ದರಿಂದ ಸಿಪಿಐಎಂ ಮತ್ತು ಬಿಜೆಪಿ ಕಾರ್ಯಕರ್ತರಿಗೆ ಹೂವಿನಲ್ಲಿ ರಾಜಕೀಯ ಧ್ವಜಗಳು ಅಥವಾ ಚಿಹ್ನೆಗಳನ್ನು ಪ್ರದರ್ಶಿಸದಂತೆ ಸೂಚಿಸಲಾಗಿತ್ತು, ಎರಡೂ ಕಡೆಯವರು ಈ ಷರತ್ತಿಗೆ ಒಪ್ಪಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತು ಮಾಹಿತಿ ಹಂಚಿಕೊಂಡಿರುವ ಪೊಲೀಸ್ ಅಧಿಕಾರಿಗಳು, "ಆಪರೇಷನ್ ಸಿಂಧೂರ" ಪದಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಿಲ್ಲ, ಆರ್‌ಎಸ್‌ಎಸ್ ಧ್ವಜ ಬಳಸಿರುವುದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.(ಏಜೆನ್ಸೀಸ್)