ನವದೆಹಲಿ: ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಸ್ಪೀಕರ್ ಸಿ.ಪಿ. ಜೋಶಿ ಅವರು ತಾವು ಸಲ್ಲಿಸಿರುವ ಈ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ.
ರಾಜಸ್ಥಾನದ ಸದ್ಯದ ರಾಜಕೀಯ ಪರಿಸ್ಥಿತಿ ಹೇಗಿದೆಯೋ ಹಾಗೆಯೇ ಯಥಾಸ್ಥಿತಿ ಮುಂದುವರೆಯಲಿ ಎಂದು ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ತಾವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಹಿಂದಕ್ಕೆ ಪಡೆಯುವುದಾಗಿ ಜೋಶೀ ಹೇಳಿದ್ದಾರೆ.
ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನೇ ಆದೇಶ ಹೊರಡಿಸಿದರೂ, ಅದು ತಾನು ನೀಡುವ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತದೆ ಎಂದು ಈ ಹಿಂದೆ ಸುಪ್ರೀಂಕೋರ್ಟ್ ಹೇಳಿತ್ತು. ಆದರೆ ಇದೀಗ ಈ ಅರ್ಜಿಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಸ್ಪೀಕರ್ ಪರವಾಗಿ ವಾದ ಮಂಡಿಸಿದ ವಕೀಲ ಕಪೀಲ್ ಸಿಬಲ್ ಅವರು, 'ಅನರ್ಹತೆ ವಿಚಾರಣೆಯನ್ನು ಸ್ಪೀಕರ್ ಶುಕ್ರವಾರದವರೆಗೆ (ಜುಲೈ24) ಮುಂದೂಡಬೇಕು ಎಂದು ಕಳೆದ ಮಂಗಳವಾರ (ಜುಲೈ 21) ರಾಜಸ್ಥಾನ ಹೈಕೋರ್ಟ್ ಆದೇಶ ನೀಡಿತ್ತು.
ಹೈಕೋರ್ಟ್ ಈ ವಿಚಾರದಲ್ಲಿ ಯಾವುದೇ ಆದೇಶ ನೀಡಬಾರದು ಎಂದು ಕೋರಿದ್ದ ಸ್ಪೀಕರ್ ಅರ್ಜಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಲಿಲ್ಲ. ಆದರೆ ಇದಾಗಲೇ ಹೈಕೋರ್ಟ್ ಯಥಾಸ್ಥಿತಿಗೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್‌ನಲ್ಲಿರುವ ಈ ಮೇಲ್ಮನವಿಯನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿದರು. ಕೋರ್ಟ್ ಅದಕ್ಕೆ ಅನುಮತಿ ನೀಡಿತು. (ಏಜೆನ್ಸೀಸ್)