ನ್ಯೂಸ್

ಬಿಜೆಪಿ ವಿರುದ್ಧ ಕರ್ನಾಟಕದಲ್ಲೂ ಹೋರಾಟ, ರಾಜಭವನ ಚಲೋಗೆ ಕ್ಷಣಗಣನೆ

ಬೆಂಗಳೂರು: ಕಾಂಗ್ರೆಸ್​ನಿಂದ ನಾಳೆ (ಸೋಮವಾರ) ಮಧ್ಯಾಹ್ನ 1.30ಕ್ಕೆ ಕೆಪಿಸಿಸಿ ಕಚೇರಿಯಿಂದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.

ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್​ ಸರ್ಕಾರಗಳನ್ನು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಹೋರಾಟ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಸೋಮವಾರ ರಾಜಭವನ್​ ಚಲೋ ಆಯೋಜಿಸಿದೆ. ಹಾಲಿ ಮತ್ತು ಮಾಜಿ ಶಾಸಕರು, ಸಂಸದರು, 2018ರ ಚುನಾವಣೆಯಲ್ಲಿ ಸ್ಪಧಿರ್ಸಿದ್ದ ಅಭ್ಯರ್ಥಿಗಳಿಗೆ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕೆಪಿಸಿಸಿ ಸೂಚಿಸಿದೆ.

ಬಿಜೆಪಿ ವಾಮಮಾರ್ಗದ ರಾಜಕಾರಣ ನಡೆಸುತ್ತಿದೆ. ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ಏನಾಯಿತು? ಮಹಾರಾಷ್ಟ್ರದಲ್ಲಿ ಮಧ್ಯರಾತ್ರಿ ಏನು ನಡೆಯಿತು? ಎಂದು ಎಲ್ಲರಿಗೂ ತಿಳಿದಿದೆ. ಇದೀಗ ಅಧಿಕಾರ ದುರ್ಬಳಕೆಯ ಮೂಲಕ ರಾಜ್ಯಸ್ಥಾನದ ರಾಜಭವನವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇದರ ವಿರುದ್ಧ ಹಾಗೂ ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಹೋರಾಟ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕರೆಕೊಟ್ಟಿದ್ದಾರೆ.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಎನ್ನುವ ಜಾಗತಿಕ ಹೆಗ್ಗಳಿಕೆಯನ್ನು ಬಿಜೆಪಿಯ ಆಪರೇಷನ್​ ಕಮಲ ನಾಶ ಮಾಡುತ್ತಿದೆ ಎಂದು ಆರೋಪಿಸಿದ ಡಿಕೆಶಿ, ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಗಳ ವಿರುದ್ಧ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಬೇಕು ಎಂದು ಹೇಳಿದರು.