ನವದೆಹಲಿ: ಚೀನಾದ ಕರೊನಾ ವೈರಸ್ ವಿಶ್ವದಾದ್ಯಂತ ಹರಡುತ್ತಿದೆ. ದೇಶದಲ್ಲಿಯೂ ಸಹ ಕರೊನಾ ಭೀತಿ ಹೆಚ್ಚಾಗಿದ್ದು, ಸೋಂಕು ಹರಡದಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೈಲುಗಳಲ್ಲಿ ಸೋಂಕಿನ ನಿಯಂತ್ರಣಕ್ಕಾಗಿ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಎಸಿ ಕೋಚ್ಗಳಲ್ಲಿರುವ ಕೆಲ ಸೌಲಭ್ಯಗಳನ್ನು ಹಿಂಪಡೆಯುವುದಾಗಿ ತಿಳಿಸಲಾಗಿದೆ.
ಸಾಮಾನ್ಯವಾಗಿ ರೈಲಿನ ಎಸಿ ಕೋಚ್ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಬೆಡ್ಶೀಟ್ಗಳನ್ನು ಕೊಡಲಾಗುತ್ತದೆ. ಹಾಗೆಯೇ ಅದರ ಕಿಟಕಿಗಳಲ್ಲಿ ಕರ್ಟನ್ಗಳನ್ನು ಹಾಕಲಾಗಿರುತ್ತದೆ. ಇದೀಗ ಈ ಎರಡೂ ಸೇವೆಯನ್ನು ಹಿಂಪಡೆಯುವುದಾಗಿ ಕೇಂದ್ರ ರೈಲ್ವೇ ಮತ್ತು ಪಶ್ಚಿಮ ರೈಲ್ವೇ ಇಲಾಖೆ ತಿಳಿಸಿದೆ. ಪ್ರತಿ ಪ್ರಯಾಣದ ನಂತರ ಬೆಡ್ಶೀಟ್ ಮತ್ತು ಕರ್ಟನ್ಗಳನ್ನು ತೊಳೆಯಲಾಗದ ಕಾರಣ ಅದೆರೆಡನ್ನು ಮುಂದಿನ ಆದೇಶದವರೆಗೂ ರೈಲುಗಳಿಂದ ತೆರವುಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಕರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆ ರೈಲುಗಳಲ್ಲಿ ಅಗತ್ಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಾಗಿ ರೈಲ್ವೇ ಸಚಿವಾಲಯ ತಿಳಿಸಿತ್ತು. ರೈಲಿನಲ್ಲಿ ಪ್ರಯಾಣಿಕರು ಅತಿ ಹೆಚ್ಚು ಸ್ಪರ್ಶಿಸುವ ಬಾಗಿಲಿನ ಹಿಡಿಕೆಗಳು, ಚಿಲಕಗಳು, ಸಿಟ್ ಗಾರ್ಡ್, ಸ್ನ್ಯಾಕ್ಸ್ ಟ್ರೇಗಳು, ಕಿಟಕಿಯ ಗ್ಲಾಸ್ ಮತ್ತು ಗ್ರಿಲ್ಗಳು, ಮೇಲಿನ ಬರ್ತ್ಗೆ ಹತ್ತಲು ಇರುವ ಏಣಿ, ಸ್ವಿಚ್ಗಳು, ಕಸದ ಬುಟ್ಟಿಗಳು ಇತ್ಯಾದಿಯನ್ನು ಸೋಂಕುನಿವಾರಕಗಳಿಂದ ಆಗಾಗ ಸ್ವಚ್ಛ ಮಾಡುವಂತೆ ತಿಳಿಸಲಾಗಿತ್ತು. ರೈಲ್ವೇ ಶೌಚಾಲಯಗಳ ಬಗ್ಗೆ ವಿಶೇಷ ಕಾಳಜಿ ತೋರಿಸಲಾಗಿದ್ದು, ಸ್ವಚ್ಛತೆಯನ್ನು ನಡೆಸಲಾಗುತ್ತಿದೆ. ಹೀಗಿರುವಾಗ ಎಸಿ ಕೋಚ್ಗಳಲ್ಲಿ ಇರುವ ಬೆಡ್ಶೀಟ್ ಮತ್ತು ಕರ್ಟನ್ಗಳನ್ನು ಆಗಾಗ ಸ್ವಚ್ಛ ಮಾಡುವುದು ಕಷ್ಟವಾದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಪ್ರತಿ ಬೋಗಿಯಲ್ಲಿಯೂ ಒಂದಿಷ್ಟು ಬೆಡ್ಶೀಟ್ಗಳನ್ನು ಹೆಚ್ಚುವರಿಯಾಗಿ ಇಡಲಾಗುತ್ತದೆ. ತೀರಾ ಅಗತ್ಯತೆ ಇದ್ದರೆ ಅದನ್ನು ಕೇಳಿ ಪಡೆದುಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ. ಇನ್ನು ನಾಲ್ಕರಿಂದ ಐದು ದಿನಗಳಲ್ಲಿ ಎಲ್ಲಾ ಕರ್ಟನ್ ಮತ್ತು ಬೆಡ್ಶೀಟ್ಗಳನ್ನು ತೆರವು ಮಾಡುವುದಾಗಿ ತಿಳಿಸಲಾಗಿದೆ. ಪ್ರಯಾಣಿಕರಿಗೆ ಅಗತ್ಯವಿದ್ದರೆ ತಾವೇ ಮನೆಯಿಂದ ಬೆಡ್ಶೀಟ್ ತಂದುಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಹೊಸ ಬೆಡ್ಶೀಟ್ಗಳನ್ನು ಪ್ರಯಾಣಿಕರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಲಾಗಿದೆ. (ಏಜೆನ್ಸೀಸ್)