ರಾಯಚೂರು: ಚಿಪ್ಸ್ ಅಥವಾ ಕುರ್ಕುರೆ ರೀತಿಯ ಪ್ಯಾಕೆಟ್ ಒಳಗೆ ಒಂದೊಂದು ಚಾಕೊಲೇಟ್ ಅಥವಾ ಕೈಗೆ ಅಂಟಿಸಿಕೊಳ್ಳುವ ಸ್ಟಿಕರ್ಸ್ ಸಿಗುವುದನ್ನು ನಾವು ನೋಡಿದ್ದೇವೆ. ಆದರೆ, ಅದೇ ಕುರ್ಕುರೆ ಥರದ ಪ್ಯಾಕೆಟ್ನಲ್ಲಿ 500 ರೂಪಾಯಿಯ ಗರಿ ಗರಿ ನೋಟು ಸಿಗುತ್ತದೆ ಅಂದರೆ ನೀವು ನಂಬುತ್ತೀರಾ? ನಂಬಲು ಅಸಾಧ್ಯವಾದರೂ ಇದು ಸತ್ಯವಾಗಿದೆ.
ಹೌದು, ಕುರ್ಕುರೆ ಥರದ ಪ್ಯಾಕೆಟ್ ಖರೀದಿ ಮಾಡಿ ಸುಮಾರು 20 ಸಾವಿರಕ್ಕೂ ಹೆಚ್ಚು ಹಣವನ್ನು ರಾಯಚೂರು ಜಿಲ್ಲೆಯ ಜನ ಪಡೆದಿದ್ದಾರೆ. ಜಿಲ್ಲೆಯ ಲಿಂಗಸಗೂರು ತಾಲೂಕಿನ ಹನೂರು ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಕುರ್ಕುರೆ ರೀತಿಯ ಪ್ಯಾಕೆಟ್ ತೆಗೆದುಕೊಳ್ಳಲು ಇದೀಗ ಜನ ಮುಗಿಬಿದ್ದಿದ್ದಾರೆ.
ಕುರ್ಕುರೆ ಥರದ ಪ್ಯಾಕೆಟ್ನಲ್ಲಿ ಹಣ ಬರುವುದನ್ನು ಖಚಿತಪಡಿಸಿಕೊಂಡು ಜನರು ಖರೀದಿಗೆ ಮುಗಿ ಬಿದ್ದಿದ್ದಾರೆ. 5 ರೂಪಾಯಿ ಪ್ಯಾಕೆಟ್ನಲ್ಲಿ 500 ರೂ. ಬಂದಿದ್ದನ್ನು ಕಂಡು ಜನ ಸಂತಸಗೊಂಡಿದ್ದಾರೆ. ಫ್ಲಿಂಗ್ಸ್ ಪಂಜಾಬ್ ತಡ್ಕಾ (Flings Punjab Tadka) ಹೆಸರಿನ ಬ್ರಾಂಡ್ನ ಪ್ಯಾಕೆಟ್ನಲ್ಲಿ ಹಣ ಪತ್ತೆಯಾಗಿದೆ.
ಬಹುಶಃ ತಮ್ಮ ಉತ್ಪನ್ನದ ಜಾಹಿರಾತು ಹಾಗೂ ಮಾರಾಟವನ್ನು ಹೆಚ್ಚಿಸುವ ಸಲುವಾಗಿ ಕಂಪನಿಯೇ ಪ್ಯಾಕೆಟ್ನಲ್ಲಿ ಹಣವಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಖಚಿತ ಕಾರಣ ಏನು ಎಂಬುದು ಯಾರಿಗೂ ತಿಳಿದಿಲ್ಲ. ತನಿಖೆಯ ಬಳಿಕವಷ್ಟೇ ಈ ಬಗ್ಗೆ ಖಚಿತ ಮಾಹಿತಿ ತಿಳಿಯಲಿದೆ. ಸದ್ಯ ಕುರ್ಕುರೆ ಥರದ ಪ್ಯಾಕೆಟ್ ತೆಗೆದುಕೊಳ್ಳಲು ಜನರು ಮಾತ್ರ ಮುಗಿಬಿದ್ದಿದ್ದಾರೆ. (ದಿಗ್ವಿಜಯ ನ್ಯೂಸ್)