ಹೈದರಾಬಾದ್: ಜನಸಾಮಾನ್ಯರೊಂದಿಗೆ ಮುಖಾಮುಖಿಯಾಗಿ ಮಾತನಾಡಸಲು ಬಯಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ನಿನ್ನೆ (ಮೇ.09) ಹೈದರಾಬಾದ್ನ ಸಾರ್ವಜನಿಕರ ಸಾರಿಗೆ ಬಸ್ನಲ್ಲಿ ದಿಢೀರ್ ಪ್ರತ್ಯಕ್ಷಗೊಂಡಿದ್ದು, ಪ್ರಯಾಣಿಕರು ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ. ಚಲಿಸುತ್ತಿದ್ದ ಬಸ್ನಲ್ಲಿ ಜನರೊಡನೆ ಪ್ರಯಾಣಿಸಿದ ರಾಹುಲ್ ಜನರೊಂದಿಗೆ ಕೆಲವು ನಿಮಿಷ ಸಂವಾದ ನಡೆಸಿದ್ದಾರೆ.
ಇದನ್ನೂ ಓದಿ: ಮುಂದಿನ ಸೀಸನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಇರಲ್ಲ! ಶಾಕಿಂಗ್ ಹೇಳಿಕೆ ಹರಿಬಿಟ್ಟ ಮಾಜಿ ಕ್ರಿಕೆಟಿಗ
ತೆಲಂಗಾಣ ರಾಜ್ಯ ಸಾರಿಗೆಯ ಬಸ್ ಹತ್ತಿದ್ದ ರಾಹುಲ್ ಗಾಂಧಿ, ರಾಜ್ಯದ ಸಿಎಂ ಎ. ರೇವಂತ್ ರೆಡ್ಡಿ ಅವರೊಡನೆ ಸೇರಿ ಪ್ರಯಾಣಿಕರ ಜತೆ ಕೆಲ ಸಮಯ ಮಾತುಕತೆ ನಡೆಸಿ, ಅವರ ಕಷ್ಟಗಳನ್ನು ಆಲಿಸಿದ್ದಾರೆ. ಸರೂರ್ನಗರದ ಮಲ್ಕಜ್ಗಿರಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕರ ಸಭೆ ಮುಗಿಸಿ, ಸಿಎಂ ಜತೆಗೆ ಬಸ್ ಹತ್ತಿದ್ದಾರೆ ಎಂದು ವರದಿಯಾಗಿದೆ.
"ದೇಶದಲ್ಲಿ ಕಾಂಗ್ರೆಸ್ನ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ, ಖಂಡಿತ ನಾವು ನಿಮಗೆ ನೀಡಿರುವ ಪ್ರಮಾಣವನ್ನು ಉಳಿಸಿಕೊಳ್ಳುತ್ತೇವೆ" ಎಂದ ರಾಹುಲ್, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಕಾಗದವನ್ನು ಪ್ರಯಾಣಿಕರಿಗೆ ಹಂಚಿ, ಅದರಲ್ಲಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
'ಪಂಚ ನ್ಯಾಯ್' ಕಾಗದವನ್ನು ಮುಂದಿಟ್ಟ ರಾಹುಲ್ ಗಾಂಧಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಂಡಿತ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಹೇಳಿದರು. ಸದ್ಯ ರಾಹುಲ್ ಬಸ್ ಹತ್ತಿ, ಪ್ರಯಾಣಿಕರ ಜತೆಗೆ ನಡೆಸಿದ ಸಂವಾದದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).