ನ್ಯೂಸ್

ಬ್ಲ್ಯಾಕ್​ ಫಂಗಸ್​ ಬಗ್ಗೆ ಮೋದಿಗೆ ಮೂರು ಪ್ರಶ್ನೆ ಕೇಳಿದ ರಾಹುಲ್​ ಗಾಂಧಿ

ನವದೆಹಲಿ: ದೇಶದಲ್ಲಿ ಕರೊನಾ ಅಬ್ಬರ ಕೊಂಚ ತಗ್ಗುತ್ತಿದೆ ಎನ್ನುವಷ್ಟರಲ್ಲಿ ಬ್ಲ್ಯಾಕ್​ ಫಂಗಸ್​ ಪ್ರಕರಣಗಳು ಹೆಚ್ಚಾಗಲಾರಂಭಿಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಬಗ್ಗೆ ಟ್ವಿಟ್ಟರ್​ನಲ್ಲಿ ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ, "ಬ್ಲ್ಯಾಕ್​ ಫಂಗಸ್​ ಮಹಾಮಾರಿಯ ಬಗ್ಗೆ ಕೇಂದ್ರ ಸರ್ಕಾರವು ಮೂರು ವಿಚಾರಗಳಲ್ಲಿ ಸ್ಪಷ್ಟನೆ ನೀಡಬೇಕು. 1) ಆಂಫೊಟೆರಿಸಿನ್​ ಬಿ ಔಷಧ ಕೊರತೆಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ? 2) ಔಷಧವನ್ನು ರೋಗಿಗಳಲ್ಲಿ ಯಾವ ವಿಧಾನದಲ್ಲಿ ನೀಡಲಾಗುತ್ತಿದೆ? 3) ಚಿಕಿತ್ಸೆ ನೀಡಬೇಕಾದ ಸಮಯದಲ್ಲಿ ಮೋದಿ ಸರ್ಕಾರ ಜನರಿಗೆ ಇನ್ನಷ್ಟು ತೊಂದರೆಗೊಳಗಾಗುವಂತೆ ಏಕಾಗಿ ಮಾಡುತ್ತಿದೆ?" ಎಂದು ಬರೆದುಕೊಂಡಿದ್ದಾರೆ.

ಅಂದ ಹಾಗೆ ದೇಶದಲ್ಲಿ ಈಗಾಗಲೇ ಬ್ಲ್ಯಾಕ್​, ವೈಟ್​, ಯೆಲ್ಲೋ, ಕ್ರೀಂ ಬಣ್ಣದ ಫಂಗಸ್​ಗಳು ಕಾಣಿಸಿಕೊಂಡಿವೆ. ಪ್ರತಿದಿನ ದೇಶದಲ್ಲಿನ ಫಂಗಸ್​ ಪ್ರಕರಣಗಳು ಏರುತ್ತಲೇ ಸಾಗಿವೆ. ಕರ್ನಾಟಕ ರಾಜ್ಯವೊಂದರಲ್ಲೇ 1250 ಮಂದಿ ಬ್ಲ್ಯಾಕ್​ ಫಂಗಸ್​ಗೆ ತುತ್ತಾಗಿದ್ದು 39 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ. (ಏಜೆನ್ಸೀಸ್)