ನ್ಯೂಸ್

ಬೆಳ್ಳಂಬೆಳಗ್ಗೆ‌ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಅಗ್ನಿ ಅವಘಡ: ಕಡತಗಳು ಬೆಂಕಿಗಾಹುತಿ

ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬೆಳ್ಳಂಬೆಳಗ್ಗೆ‌ ಅಗ್ನಿ ಅವಘಡ ಸಂಭವಿಸಿದ್ದು, ಠಾಣೆಯ ಒಂದಷ್ಟು‌ ಕಡತಗಳು ಬೆಂಕಿಗೆ ಆಹುತಿಯಾಗಿವೆ. ಸದ್ಯ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕದಳ ಯಶಸ್ವಿಯಾಗಿದೆ.

ಬೆಳಿಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಶಾರ್ಟ್ ಸರ್ಕ್ಯೂಟ್​ನಿಂದ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೂ ಒಂದಷ್ಟು‌ ಕಡತಗಳು ಬೆಂಕಿಗಾಹುತಿ ಆಗಿವೆ.

ಹಳೆಯ ಕಡತಗಳು, ಪೀಠೋಪಕರಣ ಹಾಗೂ ಕಂಪ್ಯೂಟರ್​ಗಳನ್ನ ಇರಿಸಲಾಗಿದ್ದ ಕೊಠಡಿಯಲ್ಲಿ ಈ ಅವಘಡ ಸಂಭವಿಸಿದೆ. ಅದೇ ಕೊಠಡಿಯಲ್ಲಿ ಯುಪಿಎಸ್ ಇಡಲಾಗಿತ್ತು. ಶಾರ್ಟ್ ಸರ್ಕ್ಯೂಟಿನಿಂದ ಯುಪಿಎಸ್​ಗೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರು ಮಾಹಿತಿ ನೀಡಿದ್ದು, ವಿಲ್ಸನ್ ಗಾರ್ಡನ್ ಠಾಣೆಯ ಬಲಭಾಗದಲ್ಲಿದ್ದ ಕೊಠಡಿಯಲ್ಲಿ‌ ಅವಘಡ ಸಂಭವಿಸಿದೆ. ಹಳೆಯ ಕಡತಗಳು ಹಾಗೂ ಜಪ್ತಿಯಾದ ಕೆಲ ವಸ್ತುಗಳನ್ನ ಇರಿಸಲಾಗಿತ್ತು. ಅದೇ ಕೊಠಡಿಯಲ್ಲಿ ಯುಪಿಎಸ್ ಇಡಲಾಗಿತ್ತು. ಇಂದು ಬೆಳಗ್ಗೆ 5:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕದಳದವರು‌ ಬೆಂಕಿ ಆರಿಸಿದ್ದಾರೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟಿನಿಂದ ಅವಘಡ ಸಂಭವಿಸಿದಂತಿದೆ. ಘಟನೆಯ ಕುರಿತು ವರದಿ ನೀಡುವಂತೆ ಎಸಿಪಿಯವರಿಗೆ ಸೂಚಿಸಿದ್ದೇನೆ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)