ಹೈದರಾಬಾದ್: ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿಲ್ಲ ಮತ್ತು ಕಾಂಡೋಮ್ ಬಳಸುವುದರಲ್ಲಿ ಮುಸ್ಲಿಮರೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎನ್ನುವ ಮೂಲಕ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಜನಸಂಖ್ಯಾ ನಿಯಂತ್ರಣ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹೈದರಾಬಾದ್ನಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋವೊಂದನ್ನು ಓವೈಸಿ ಟ್ವೀಟ್ ಮಾಡಿದ್ದು, ದೇಶದಲ್ಲಿ ಮುಸ್ಲಿಮರ ಜನಸಖ್ಯೆ ಹೆಚ್ಚಾಗುತ್ತಿಲ್ಲ, ಬದಲಾಗಿ ಕುಸಿಯುತ್ತಿದೆ. ಮುಸ್ಲಿಮರಲ್ಲೂ ಮಕ್ಕಳ ನಡುವಿನ ಅಂತರ ಹೆಚ್ಚುತ್ತಿದೆ. ಹೆಚ್ಚಾಗಿ ಕಾಂಡೋಮ್ ಬಳಸುತ್ತಿರುವವರು ಯಾರು? ನಾವುಗಳು. ಆದರೆ, ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ ಎಂದು ವಿಡಿಯೋದಲ್ಲಿ ಓವೈಸಿ ಹೇಳಿದ್ದಾರೆ.
ಈ ಹಿಂದೆ ಆರ್ಎಸ್ಎಸ್ ವಾರ್ಷಿಕ ದಸರಾ ಸಮಾವೇಶದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, ಎಲ್ಲರಿಗೂ ಅನ್ವಯಿಸುವ ಜನಸಂಖ್ಯಾ ನಿಯಂತ್ರಣ ನೀತಿ ಭಾರತಕ್ಕೆ ಅಗತ್ಯವಿದೆ ಎಂದಿದ್ದರು. ಅಲ್ಲದೆ, ಜನಸಂಖ್ಯೆಯ ನಿಯಂತ್ರಣದ ಜೊತೆಗೆ ಧಾರ್ಮಿಕ ಆಧಾರದ ಮೇಲಿನ ಸಮತೋಲನವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದಿದ್ದರು.
ಮೋಹನ್ ಭಾಗವತ್ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತನಾಡಿದ್ದನ್ನು ವಿರೋಧಿಸಿರುವ ಓವೈಸಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ-5 ವರದಿಯನ್ನು ಉಲ್ಲೇಖಿಸಿ, ಒಟ್ಟು ಫಲವತ್ತತೆ ದರ (ಟಿಎಫ್ಆರ್) ಮುಸ್ಲಿಮರಲ್ಲೇ ಹೆಚ್ಚಾಗಿ ಕುಸಿದಿದೆ ಎಂದರು. ಅಲ್ಲದೆ, 2000 ದಿಂದ 2019ರವರೆಗೆ ಲಕ್ಷಾಂತರ ಹಿಂದು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಇದರು ಕೂಡ ಸರ್ಕಾರವೇ ನೀಡಿರುವ ಅಂಕಿ-ಅಂಶವಾಗಿದೆ. ಆದರೆ, ಮೋಹನ್ ಭಾಗವತ್ ಅವರು ಈ ಬಗ್ಗೆ ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದರು.
ನೆನಪಿಡಿ, ಹಿಂದು ರಾಷ್ಟ್ರವು ಭಾರತೀಯ ರಾಷ್ಟ್ರೀಯತೆಗೆ ವಿರುದ್ಧವಾಗಿದೆ. ಇದು ಭಾರತದ ವಿರುದ್ಧವಾಗಿದೆ ಎಂದು ಓವೈಸಿ ಹೇಳಿದರು. (ಏಜೆನ್ಸೀಸ್)