

ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದ ಪೇದೆಯನ್ನು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ಇಲ್ಲಿನ ಗ್ರಾಮೀಣ ಠಾಣೆ ಪೇದೆ ರಾಜಶೇಖರ ಖಾನಾಪುರ ಈತನನ್ನು ಶನಿವಾರ ಅಮಾನತ್ತುಗೊಳಿಸಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನನ್ನು ಕುರಿತು "ಪೊಲೀಸರನ್ನು ಬೈಯುವ ನೀನು ಪೊಲೀಸ್ ಎಸ್ಕಾರ್ಟ್ ಇಲ್ಲದೆ ಮನೆಗೆ ಹೋಗು ನೋಡೋಣ" ಎಂದು ಪೋಸ್ಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪೇದೆಯ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಪೋಸ್ಟ್ ವೈರಲ್ ಬೆನ್ನಲ್ಲೇ ಕುರುಬ ಸಮಾಜದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಒತ್ತಾಯ ಮತ್ತು ದೂರು ಆಧರಿಸಿ ಪೇದೆಯನ್ನು ಅಮಾನತ್ತುಗೊಳಿಸಿದ್ದಾಗಿ ಎಸ್ಪಿ ಎಚ್. ಡಿ. ಆನಂದಕುಮಾರ "ವಿಜಯವಾಣಿ" ಗೆ ಪ್ರತಿಕ್ರಿಯಿಸಿದ್ದಾರೆ.