ನೋಯ್ಡಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಬೃಹತ್ ಅವಳಿ ಗೋಪುರ ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿಯನ್ನು ಭಾರಿ ಸ್ಫೋಟಕ ಸಹಾಯದಿಂದ ಇಂದು ಮಧ್ಯಾಹ್ನ ನೆಲಸಮ ಮಾಡಿದ ಬಳಿಕ ಆ ಪ್ರದೇಶವನ್ನು ಡ್ರೋನ್ ಕ್ಯಾಮೆರಾದಿಂದ ಸೆರೆ ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವಳಿ ಗೋಪುರ ಇದ್ದ ಜಾಗ ಸಂಪೂರ್ಣ ನೆಲಸಮ ಆಗಿದ್ದು, ಅವಶೇಗಳ ರಾಶಿ ಆ ಪ್ರದೇಶದಲ್ಲಿ ಬಿದ್ದಿವೆ. ಸ್ಫೋಟದಿಂದ ಸುಮಾರು 55 ಸಾವಿರ ಟನ್ ಅವಶೇಷ ಉತ್ಪತಿಯಾಗಿದ್ದು, ಬಹುಶಃ ಅದನ್ನು ತೆರವು ಮಾಡಲು ಸುಮಾರು 3 ತಿಂಗಳುಗಳ ಕಾಲ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ತ್ಯಾಜ್ಯವನ್ನು ನಿಗದಿತ ಜಾಗದಲ್ಲಿ ಸುರಿಯಲಾಗುತ್ತದೆ.
2004ರಲ್ಲಿ ಸುಮಾರು 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಗೋಪುರವನ್ನು ಇದೀಗ 20 ಕೋಟಿ ರೂಪಾಯಿ ಖರ್ಚು ಮಾಡಿ ಕೇವಲ 9 ಸೆಕೆಂಡ್ಗಳಲ್ಲಿ ಧರೆಗುರುಳಿಸಲಾಯಿತು. ಅವಳಿ ಗೋಪುರಗಳಲ್ಲಿ 3,700 ಕೆಜಿ ಸ್ಫೋಟಕಗಳನ್ನು ಸಜ್ಜುಗೊಳಿಸಲಾಗಿತ್ತು. ಕಟ್ಟಡಗಳ ಕಂಬಗಳಲ್ಲಿ ಸುಮಾರು 7,000 ರಂಧ್ರಗಳನ್ನು ಕೊರೆದು ಸ್ಫೋಟಕಗಳನ್ನು ಸೇರಿಸಲಾಯಿತು ಮತ್ತು 20,000 ಸರ್ಕ್ಯೂಟ್‌ಗಳನ್ನು ಅಳವಡಿಸಲಾಯಿತು. “ಜಲಪಾತ ತಂತ್ರ” ಎಂದು ಕರೆಯಲ್ಪಡುವ ಗೋಪುರಗಳು ನೇರವಾಗಿ ಕೆಳಗೆ ಬೀಳುವಂತೆ ಖಚಿತಪಡಿಸಿಕೊಳ್ಳಲು ಸ್ಫೋಟಕಗಳನ್ನು ಯೋಜಿಸಲಾಗಿತ್ತು.
ಸ್ಫೋಟಕ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 7,000 ನಿವಾಸಿಗಳನ್ನು ಇಂದು ಬೆಳಿಗ್ಗೆ ಬೇರಡೆಗೆ ಸ್ಥಳಾಂತರ ಮಾಡಲಾಯಿತು. ಅಕ್ಕಪಕ್ಕದ ಕಟ್ಟಡಗಳಲ್ಲಿ ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯನ್ನು ಮುನ್ನೆಚ್ಛರಿಕಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದ್ದು, ಸಂಜೆ 4 ಗಂಟೆಯ ಬಳಿಕ ಅವುಗಳನ್ನು ಪುನಃಸ್ಥಾಪಿಸಲಾಗಿದೆ. ಸ್ಥಳೀಯ ನಿವಾಸಿಗಳಿಗೆ ಸಂಜೆ 5.30 ರೊಳಗೆ ತಮ್ಮ ಮನೆಗಳಿಗೆ ಹಿಂತಿರುಗಲು ಅನುಮತಿಸಲಾಗಿದೆ.
ಈ ಗೋಪುರಗಳನ್ನು ಅಕ್ರಮವಾಗಿ ಕಟ್ಟಿರುವ ಕಾರಣ ನೆಲಸಮ ಮಾಡುವಂತೆ ಕಳೆದ ವರ್ಷ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್ ಆದೇಶಿಸಿತು. ಸೂಪರ್ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸುತ್ತಿದ್ದ ಅವಳಿ ಗೋಪುರಗಳನ್ನು ಕೆಡವಲು ಆಗಸ್ಟ್ 31, 2021ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕಟ್ಟಡವನ್ನು ಇಂದು ಮಧ್ಯಾಹ್ನ 2.30ಕ್ಕೆ ನೆಲಸಮ ಮಾಡಲಾಯಿತು. (ಏಜೆನ್ಸೀಸ್)