ನ್ಯೂಸ್

ಗಾಲ್ಫ್​ ಆಡುವಾಗ ಬೆನ್ನ ಹಿಂದೆಯೇ ಹೊಂಚು ಹಾಕಿ ಬರುತ್ತಿರೋ ಮೊಸಳೆ: ಮುಂದೇನಾಯ್ತು ನೀವೇ ನೋಡಿ

ನ್ಯೂಯಾರ್ಕ್​: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಆದರೆ, ಕೆಲವೊಂದು ವಿಡಿಯೋಗಳು ಕ್ಷಣಾರ್ಧದಲ್ಲಿ ವೈರಲ್​​ ಆಗಿಬಿಡುತ್ತವೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಹಿಂದೆಯಿಂದ ಮೊಸಳೆಯೊಂದು ಹತ್ತಿರ ಬರುತ್ತಿದ್ದರೂ ವ್ಯಕ್ತಿಯೊಬ್ಬ ಕೂಲ್​ ಆಗಿ ಗಾಲ್ಫ್​ ಆಡುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ವಿಡಿಯೋವನ್ನು ಮೆಲಿಸ್ಸಾ ವಾಲ್ಶ್​ ಎಂಬುವರು ತಮ್ಮ ಫೇಸ್​ಬುಕ್​ನಲ್ಲಿ ಜೂನ್​ 27ರಂದು ಶೇರ್​ ಮಾಡಿಕೊಂಡಿದ್ದು, ಗಾಲ್ಫ್ ಮೈದಾನದಲ್ಲಿ ಪತಿ ಎಂಬ ಶೀರ್ಷಕೆ ನೀಡಿದ್ದಾರೆ. ಫ್ಲೊರಿಡಾದ ನ್ಯಾಪ್ಲೆಸ್​ನಲ್ಲಿ ಸೆರೆಹಿಡಿದ ವಿಡಿಯೋ ಇದಾಗಿದೆ.

ವಿಡಿಯೋದಲ್ಲಿರುವ ವ್ಯಕ್ತಿಯನ್ನು ಮೈಕೆಲ್​​ ವೆಸ್ಟ್​ ಎಂದು ಗುರುತಿಸಲಾಗಿದೆ. ಗಾಲ್ಫ್​ ಹೊಡೆತಕ್ಕೆ ಸಿದ್ಧವಾಗಿ ನಿಂತಿರುವಾಗ ಹಿಂಬದಿಯಿಂದ ಮೊಸಳೆಯೊಂದು ಮೈಕೆಲ್​ ವೆಸ್ಟ್ ಕಡೆಗೆ ಹೊಂಚು ಹಾಕಿಕೊಂಡು ಬರುತ್ತಿರುವಂತೆ ಕಾಣುತ್ತದೆ. ಮೊಸಳೆ ಬರುತ್ತಿರುವುದನ್ನು ಮೈಕೆಲ್​ ಗಮನಿಸಿದರೂ ಕೂಲ್​ ಆಗಿಯೇ ಗಾಲ್ಫ್​ ಚೆಂಡನ್ನು ತಮ್ಮ ಗುರಿಯೆಡೆಗೆ ಬಾರಿಸುತ್ತಾರೆ. ಗಾಲ್ಫ್​ ಶಾಟ್​ ಬಾರಿಸಿದ ಕೂಡಲೇ ನಡೆದುಬರುತ್ತಿದ್ದ ಮೊಸಳೆ ಹಾಗೇ ನೆಲದ ಮೇಲೆ ಮಲಗಿಬಿಡುತ್ತದೆ.

ಅಂದಹಾಗೆ ಮೈಕೆಲ್​ ವೆಸ್ಟ್​ ಗಾಲ್ಫ್​ ಆಡುವಾಗ ಅವರ ಪತ್ನಿಯೇ ಈ ವಿಡಿಯೋ ಸೆರೆಹಿಡಿದಿದ್ದಾರೆ. 14 ಸೆಕೆಂಡ್​ ಉದ್ದದ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಡ್ಯೂಡ್ ಸ್ವಿಂಗ್ ನಂತರ ಮೊಸಳೆ ಕೆಳಗೆ ಬೀಳುವುದನ್ನು ನೋಡಿ ನನಗೆ ಖುಷಿಯಾಯಿತು ಎನ್ನುವ ಮೂಲಕ ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)