More

    ಆಯುಷ್ಮಾನ್ ಅಯೋಮಯ!; ತುರ್ತು ಚಿಕಿತ್ಸೆಗೆ ಪರದಾಟ, ಖಾಸಗಿ ಆಸ್ಪತ್ರೆಗೆ ದಾಖಲಾದರೆ ಸಂಕಷ್ಟ..

    | ಪಂಕಜ ಕೆ.ಎಂ. ಬೆಂಗಳೂರು

    ಬಡ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಜಾರಿಯಾಗಿರುವ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ (ಎಬಿ-ಎಆರ್​ಕೆ) ಯೋಜನೆಯಡಿ ತುರ್ತು ಚಿಕಿತ್ಸೆ ಪಡೆಯಲು ಸಾರ್ವಜನಿಕರ ಪರದಾಟ ಮುಂದುವರಿದಿದೆ. ಅಪಘಾತ, ಹೃದಯಾಘಾತದಂತಹ ಜೀವಹಾನಿ ಸಂದರ್ಭದಲ್ಲೂ ಸರ್ಕಾರಿ ಆಸ್ಪತ್ರೆ ಹುಡುಕಿಕೊಂಡು ಹೋಗಬೇಕಿದೆ. ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳದ್ದರಿಂದಾಗಿ ದುಡ್ಡು ಕೊಟ್ಟು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ.

    ರಾಜ್ಯದಲ್ಲಿ ಈವರೆಗೆ ಎಬಿ-ಎಆರ್​ಕೆ ಯೋಜನೆಯಡಿ 1.75 ಕೋಟಿಗೂ ಅಧಿಕ ಮಂದಿಗೆ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಆದರೆ, ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ಅನುವಾಗುವಂತೆ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳ ಮನವೊಲಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ರಾಜ್ಯದಲ್ಲಿ 6 ಸಾವಿರ ಖಾಸಗಿ ಆಸ್ಪತ್ರೆಗಳ ಪೈಕಿ ಈವರೆಗೆ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಆಸ್ಪತ್ರೆಗಳ ಸಂಖ್ಯೆ ಕೇವಲ 575. ಹೀಗಾಗಿ ತುರ್ತು ಸಂದರ್ಭಗಳಲ್ಲಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯಬೇಕಾಗಿದೆ. ಅಪಘಾತ ಸೇರಿ ಯಾವುದೇ ತುರ್ತು ಸಮಸ್ಯೆಗೆ ಒಳಗಾದ ವ್ಯಕ್ತಿಯನ್ನು ಹತ್ತಿರದ ಅಸ್ಪತ್ರೆಗೆ (ಗೋಲ್ಡನ್ ಅವರ್ ಮೀರುವ ಮುನ್ನ) ಸೇರಿಸಬೇಕು. ಆದರೆ, ಆ ಆಸ್ಪತ್ರೆಯು ಯೋಜನೆಯಡಿ ನೋಂದಣಿ ಆಗದಿದ್ದಲ್ಲಿ, ವ್ಯಕ್ತಿಗೆ ತುರ್ತು ಚಿಕಿತ್ಸೆ ದೊರೆತರೂ ಯೋಜನೆಯ ಲಾಭ ಪಡೆಯಲಾಗದು.

    ರೋಗಿ ವೆಂಟಿಲೇಟರ್​ನಲ್ಲಿದ್ದರೆ ಅವರು ಯೋಜನೆಯಡಿ ಚಿಕಿತ್ಸೆ ಪಡೆಯಲು ಅರ್ಹರಿದ್ದರೂ, ಅಂತಹ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳುವುದಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಇವೆಲ್ಲವೂ ಯೋಜನೆಯ ಸಫಲತೆಗೆ ತೊಡಕಾಗಿ ಪರಿಣಮಿಸಿದೆ.

    ಸಮಸ್ಯೆಗೆ ಕಾರಣವೇನು?: ಯೋಜನೆಯಡಿ ಹೆಚ್ಚಿನ ಆಸ್ಪತ್ರೆಗಳು ನೋಂದಣಿ ಆಗದಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆಗಳ ವೈದ್ಯರು. ತುರ್ತು ಸಂದರ್ಭದಲ್ಲಿ ರೋಗಿಯನ್ನು ಯಾವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಯೋಚಿಸುತ್ತಾ ಸಮಯ ವ್ಯರ್ಥ ಮಾಡಿದರೆ ರೋಗಿಯ ಜೀವಕ್ಕೆ ಆಪತ್ತು. ಆ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯಷ್ಟೇ ಮುಖ್ಯವಾಗಿರುತ್ತದೆ. ಹೀಗಾಗಿ ತುರ್ತು ಚಿಕಿತ್ಸೆಯನ್ನು ಯಾವುದೇ ಆಸ್ಪತ್ರೆಯಲ್ಲಿ (ನೋಂದಾಯಿತ ಅಥವಾ ನೋಂದಾಯಿತವಲ್ಲದ) ಪಡೆಯಲಿ ಹಣ ಪಾವತಿ ಆಗುವಂತೆ ವ್ಯವಸ್ಥೆ ಜಾರಿಗೊಂಡರೆ ಒಳಿತು ಎನ್ನುತ್ತಾರೆ.

    ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯಡಿ ಕೇಂದ್ರ ಸರ್ಕಾರ ಹೊಸ ಹೆಲ್ತ್ ಪ್ಯಾಕೇಜ್ ಪ್ರಕಟಿಸಿದ್ದು, ಅದರಲ್ಲಿ ಚಿಕಿತ್ಸೆಯ ದರ ಪ್ರಸ್ತುತ ದರಕ್ಕೆ ಪೂರಕವಾಗಿದೆ. ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಇದರ ನಂತರ ಖಾಸಗಿ ಆಸ್ಪತ್ರೆಗಳು ನೋಂದಣಿಗೆ ಮುಂದಾಗ ಬಹುದು. ಇನ್ನು ಯೋಜನೆಯಡಿ ಇರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.

    | ಡಿ. ರಂದೀಪ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ

    ಚಿಕಿತ್ಸೆ ದರ ತುಂಬಾ ಕಡಿಮೆ ಇದ್ದು, ಹಣ ಪಾವತಿಯೂ ವಿಳಂಬವಾಗುತ್ತಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗಳು ನೋಂದಣಿಗೆ ಆಸಕ್ತಿ ತೋರುತ್ತಿಲ್ಲ. ಇದರ ಬದಲಿಗೆ ಸರ್ಕಾರ ಜನರಿಗೆ ವಿಮೆ ಮಾದರಿಯಲ್ಲಿ ಸ್ವತಃ ಪ್ರೀಮಿಯಂ ಪಾವತಿ ಮಾಡುವ ಯೋಜನೆ ಜಾರಿಗೊಳಿಸಿ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಅನುವು ಮಾಡಿಕೊಡಬೇಕು.

    | ಡಾ.ಪ್ರಸನ್ನ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳ ಅಸೋಸಿಯೇಷನ್ ಅಧ್ಯಕ್ಷ

    ಯಶಸ್ವಿನಿಯಿಂದ ಅನುಕೂಲ: ಈ ಹಿಂದೆ ಇದ್ದ ಯಶಸ್ವಿನಿ ಯೋಜನೆಯ ಮರುಜಾರಿಗೆ ಸರ್ಕಾರ ನಿರ್ಧರಿಸಿದ್ದು, ಇದರಿಂದ ಸ್ವಲ್ಪ ಅನುಕೂಲವಾಗುವ ನಿರೀಕ್ಷೆ ಇದೆ.

    ದೂರ ಉಳಿದ ಎಪಿಎಲ್ ಕಾರ್ಡ್​ದಾರರು: ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆಯಿಂದ ಎಪಿಎಲ್ ಕಾರ್ಡದಾರರು ದೂರವೇ ಉಳಿದಿದ್ದಾರೆ. ಎಪಿಎಲ್ ಕಾರ್ಡದಾರರಿಗೆ ಕೇವಲ ಶೇ. 30 ರಿಯಾಯಿತಿ ನೀಡಿದ್ದು, ಉಳಿದ ಶೇ. 70 ರೋಗಿಯೇ ಭರಿಸಬೇಕು. ಇಲಾಖೆ ಮಾಹಿತಿ ಪ್ರಕಾರ ಯೋಜನೆಯಡಿ ಚಿಕಿತ್ಸೆ ಪಡೆದಿರುವವರಲ್ಲಿ ಶೇ. 98 ಬಿಪಿಎಲ್ ಹಾಗೂ ಶೇ. 2 ಎಪಿಎಲ್ ಕಾರ್ಡ್​ದಾರರಿದ್ದಾರೆ. ಬಿಪಿಎಲ್ ಕಾರ್ಡದಾರರಿಗೆ ಉಚಿತ ಎಂದಿದ್ದರೂ ಐಸಿಯು ಇತ್ಯಾದಿಗೆ ಹಣ ಪಾವತಿಸ ಬೇಕಾಗುತ್ತದೆ ಎಂಬುದು ಜನರ ಅಳಲು.

    ಸಮಸ್ಯೆಗಳೇನು?

    • ಫಲಾನುಭವಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ
    • ತುರ್ತು ಚಿಕಿತ್ಸೆಗೆ ತೊಂದರೆ
    • ನೋಂದಣಿಯಾಗದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ವತಃ ಹಣ ಪಾವತಿಸಬೇಕು
    • ಚಿಕಿತ್ಸಾ ದರ ಕಡಿಮೆ, ಹಣ ಪಾವತಿ ವಿಳಂಬದಿಂದಾಗಿ ನೋಂದಣಿಗೆ ಖಾಸಗಿ ಆಸ್ಪತ್ರೆಗಳ ಹಿಂದೇಟು
    • ಕಾರ್ಡ್ ಇದ್ದರೂ ಹಣ ಪಾವತಿಸಲು ಸೂಚಿಸುವ ಆಸ್ಪತ್ರೆಗಳು
    • ಐಸಿಯು, ವೆಂಟಿಲೇಟರ್​ನಲ್ಲಿದ್ದರೆ ರೋಗಿ ದಾಖಲಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಗಳ ಹಿಂದೇಟು

    196 ತುರ್ತು ಚಿಕಿತ್ಸೆಗಳು: ಹೃದಯಾಘಾತ, ರಸ್ತೆ ಅಪಘಾತ ಸೇರಿ 196 ತುರ್ತು ಚಿಕಿತ್ಸೆಗಳನ್ನು ಯೋಜನೆಯಡಿ ಗುರುತಿಸಲಾಗಿದೆ.

    ವಿಮೆಗೆ ಯೋಜನೆ ಅನ್ವಯವಾಗದು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಿಂದ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ವಿಮೆ ಹೊಂದಿರುವವರನ್ನು ಹೊರಗಿಡಲಾಗಿದೆ. ರಾಜ್ಯ ಸರ್ಕಾರಿ ನೌಕರರು, ಸಿಜಿಎಚ್​ಎಸ್ ಆರೋಗ್ಯ ವಿಮೆ ಸೌಲಭ್ಯ ಹೊಂದಿರುವ ಕೇಂದ್ರ ಸರ್ಕಾರದ ಹಾಲಿ ಹಾಗೂ ನಿವೃತ್ತ ನೌಕರರು, ಇಎಸ್​ಐ ಫಲಾನುಭವಿಗಳು, ಖಾಸಗಿ ಕಂಪನಿಗಳಲ್ಲಿ ಆರೋಗ್ಯ ವಿಮೆ ಹೊಂದಿರುವ ಹಾಗೂ ಖಾಸಗಿ ಆರೋಗ್ಯ ವಿಮೆ ಹೊಂದಿರುವವರಿಗೆ ಯೋಜನೆ ಅನ್ವಯವಾಗುವುದಿಲ್ಲ. ಹೀಗಾಗಿ ಉಳಿದವರಿಗೆ ಎಪಿಎಲ್, ಬಿಪಿಎಲ್ ಎಂದು ವಿಂಗಡಿಸದೆ ಒಂದೇ ರೀತಿ ಚಿಕಿತ್ಸೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ನಿಯಮ ಪರಿಷ್ಕರಿಸಲಿ

    ಯೋಜನೆಯಡಿ ನೋಂದಣಿಯಾದ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಬಹುದಾಗಿದೆ. ಆಸ್ಪತ್ರೆ ನೋಂದಣಿ ಆಗದಿದ್ದಲ್ಲಿ, ಪ್ರಾಥಮಿಕ ಹಂತದ ಚಿಕಿತ್ಸೆ ಪಡೆದು ನಂತರ ನೋಂದಾಯಿತ ಆಸ್ಪತ್ರೆಗೆ ಸ್ಥಳಾಂತರಗೊಂಡು ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ ರೋಗಿಯೇ ಹಣ ಪಾವತಿಸಬೇಕಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಆದರೆ, ಒಮ್ಮೆ ದಾಖಲಾದ ನಂತರ ಬೇರೊಂದು ಆಸ್ಪತ್ರೆಗೆ ಹೋಗುವುದು ಹೇಗೆ? ಎನ್ನುವುದು ರೋಗಿಗಳ ಪ್ರಶ್ನೆ. ತುರ್ತು ಚಿಕಿತ್ಸೆ ಪಡೆಯುವ ರೋಗಿಗಳನ್ನು ಬಹುತೇಕ ಸಂದರ್ಭದಲ್ಲಿ (ರೋಗಿ ಗಂಭೀರ ಸ್ಥಿತಿಯಲ್ಲಿದ್ದಾಗ) ಸ್ಥಳಾಂತರ ಸಾಧ್ಯವಾಗುವುದಿಲ್ಲ. ಅದಕ್ಕೆ ಆಸ್ಪತ್ರೆಯವರು ಸಮ್ಮತಿಸುವುದೂ ಇಲ್ಲ. ಆಗ ರೋಗಿಗಳು ಅನಿವಾರ್ಯವಾಗಿ ಹಣ ಪಾವತಿಸಬೇಕಾಗುತ್ತದೆ. ಹೀಗಾಗಿ ನಿಯಮ ಸರಳಗೊಳಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts