ನ್ಯೂಸ್

ವಿಜಯನಗರ: ದೂರು ನೀಡಲು ಬಂದ ವ್ಯಕ್ತಿಯ ಮಗಳನ್ನು ಮಂಚಕ್ಕೆ ಕರೆದ ಪೊಲೀಸ್ ಹೆಡ್​ ಕಾನ್ಸ್​ಟೇಬಲ್​

ವಿಜಯನಗರ: ಪೊಲೀಸ್​ ಇಲಾಖೆ ತಲೆತಗ್ಗಿಸುವಂತಹ ಘಟನೆಯೊಂದು ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ದೂರು ನೀಡಲು ಠಾಣೆಗೆ ಬಂದ ವ್ಯಕ್ತಿಯ ಮಗಳ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಪೊಲೀಸ್​ ಪೇದೆಯೊಬ್ಬರ ವಿರುದ್ಧ ಕೇಳಿಬಂದಿದ್ದು, ತಕ್ಷಣ ಆರೋಪಿ ಪೇದೆಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್​ ಮಾರೆಪ್ಪ ವಿರುದ್ಧ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ ಆರೋಪ ಕೇಳಿಬಂದಿದ್ದು, ಸದ್ಯ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. ಈತ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಂಗಾರಕ್ಕನ ಗುಡ್ಡದ ನಿವಾಸಿ.

ದೂರು ನೀಡಲು ಬಂದ ವ್ಯಕ್ತಿಯ ಮಗಳ ಜೊತೆಗೆ ಮಾರೆಪ್ಪ ಫೋನ್​ ಸಂಭಾಷಣೆ ನಡೆಸಿ, ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ್ದಾರೆಂದು ಹೇಳಲಾಗಿದೆ. ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಪ್ರಕರಣವನ್ನು ನಿಮ್ಮ ಪರವಾಗಿ ಮಾಡುತ್ತೇನೆ. ನಿನ್ನ ಮೇಲೆ ನನಗೆ ಮನಸ್ಸಾಗಿದೆ. ಎಲ್ಲಾದರೂ ಹೋಗಿ ಇಬ್ಬರು ಸೇರೋಣ ಎಂದು ಮಾರೆಪ್ಪ ಫೋನ್​ ಮೂಲಕ ಒತ್ತಾಯ ಮಾಡಿದ್ದಾರೆಂದು ದೂರಲಾಗಿದೆ.

ಫೋನ್​ನಲ್ಲಿ ತೆಲುಗು ಭಾಷೆಯಲ್ಲಿ ಮಾರೆಪ್ಪ ಸಂಭಾಷಣೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಲೈಂಗಿಕ ಕ್ರಿಯೆಯ ಸಮ್ಮತಿಗೆ ಒತ್ತಾಯ ಮಾಡಿರುವ ದೂರಿನ ಆಧಾರದ ಮೇಲೆ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಕೊಟ್ಟೂರು ಪೊಲೀಸ್ ಠಾಣೆಯಲ್ಲೇ ಮಾರೆಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)