ಭೋಪಾಲ್: ವ್ಯಕ್ತಿಯೊಬ್ಬ ಬೈಕ್ ರಿವರ್ಸ್ ತೆಗೆಯುವಾಗ ಆಕಸ್ಮಿಕವಾಗಿ ಬಟ್ಟೆಯ ಮೇಲೆ ಕೆಸರು ಎರಚಿದ್ದಕ್ಕೆ ಕುಪಿತಗೊಂಡ ಮಹಿಳಾ ಪೊಲೀಸ್ ಒಬ್ಬರು ಬೈಕ್ ಸವಾರನಿಂದ ಬಲವಂತವಾಗಿ ಬಟ್ಟೆ ಸ್ವಚ್ಛ ಮಾಡಿಸಿದಲ್ಲದೆ, ಆತನ ಮೇಲೆ ಕೈ ಮಾಡಿರುವ ಘಟನೆ ಮಧ್ಯಪ್ರದೇಶದ ರೇವಾದ ಸಿರ್ಮೌರ್ ಚೌಕದ ಬಳಿ ನಡೆದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಸರು ಎರಚಿರುವ ವಿಡಿಯೋ ಇಲ್ಲ. ಆದರೆ, ಸದ್ಯ ಹರಿದಾಡುತ್ತಿರುವ ವಿಡಿಯೋದಲ್ಲಿ ಮಹಿಳಾ ಪೊಲೀಸ್, ಬೈಕ್ ಸವಾರನಿಂದ ತನ್ನ ಬಟ್ಟೆಯನ್ನು ಸ್ವಚ್ಛ ಮಾಡಿಸುತ್ತಿರುವ ದೃಶ್ಯವಿದೆ. ಅಲ್ಲದೆ, ವಿಡಿಯೋ ಕೊನೆಯಲ್ಲಿ ಆತನ ಮೇಲೆ ಕೈ ಮಾಡಿ ಹೋಗುತ್ತಿರುವುದು ಸೆರೆಯಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿರುವುದರಿಂದ ಮಹಿಳಾ ಪೊಲೀಸ್ ಮುಖ ಕಾಣಸಿಲ್ಲ.
6 ಸೆಕೆಂಡ್ ವಿಡಿಯೋ ತುಣುಕು ವೈರಲ್ ಆಗಿದ್ದು, ಮಹಿಳಾ ಪೊಲೀಸ್ ದುರ್ವತನೆ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿವೆ. ಪೊಲೀಸ್ ಅಧಿಕಾರಿಯನ್ನು ಶಶಿಕಲಾ ಎಂದು ಗುರುತಿಸಲಾಗಿದೆ. ಹೋಮ್ ಗಾರ್ಡ್ ಕಾನ್ಸ್ಟೇಬಲ್ ಆಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ನಾವು ವೀಡಿಯೊವನ್ನು ನೋಡಿದ್ದೇವೆ. ಅದರಲ್ಲಿ ಒಬ್ಬ ವ್ಯಕ್ತಿಯನ್ನು ಅಧಿಕಾರಿಯ ಪ್ಯಾಂಟ್ ಸ್ವಚ್ಛಗೊಳಿಸಲು ಬಲವಂತ ಮಾಡಿರುವುದು ತೋರುತ್ತಿದೆ. ಅಲ್ಲದೆ, ಕಪಾಳಮೋಕ್ಷ ಸಹ ಮಾಡಿದ್ದಾರೆ. ಯಾರಾದರೂ ನಮ್ಮ ಬಳಿಗೆ ಬಂದು ದೂರು ನೀಡಿದರೆ, ನಂತರ ನಾವು ಪ್ರಕರಣದ ವಿಚಾರಣೆ ನಡೆಸುತ್ತೇವೆ ಎಂದು ಹೆಚ್ಚುವರಿ ಎಸ್ಪಿ (ರೇವಾ) ಶಿವಕುಮಾರ್ ಹೇಳಿದ್ದಾರೆ. (ಏಜೆನ್ಸೀಸ್)