ನ್ಯೂಸ್

ವಯಸ್ಸಾಗೋದು ದೇಹಕ್ಕೆ ಹೊರತು ಉತ್ಸಾಹಕ್ಕಲ್ಲ: ಅಜ್ಜಿಯ ಈ ವಿಡಿಯೋ ನೋಡಿದ್ರೆ ಹುಬ್ಬೇರೋದು ಖಂಡಿತ!

ನವದೆಹಲಿ: ವಯಸ್ಸಾಗುವುದು ದೇಹಕ್ಕಷ್ಟೇ ಹೊರತು ಉತ್ಸಾಹಕ್ಕಲ್ಲ ಎಂಬ ಮಾತು ಹರಿಯಾಣದ ಸೋನೆಪತ್ ಮೂಲದ 73 ವರ್ಷದ ಈ ವೃದ್ಧೆಯನ್ನು ನೋಡಿದ ನಿಜ ಎನಿಸದೇ ಇರದು. ಈ ಇಳಿ ವಯಸ್ಸಿನಲ್ಲಿ ನಮ್ಮ ಕೈಯಲ್ಲಿ ಏನು ಆಗಲ್ಲ. ಒಂದು ಮೂಲೆ ಸೇರಿಬಿಟ್ಟರೆ ಸಾಕು ಎನ್ನುವವರೇ ಹೆಚ್ಚು. ಆದರೆ, ಈ ವೃದ್ಧೆ ಮಾತ್ರ ಆಗಿಲ್ಲ. ಇವರು ಮಾಡಿರುವ ಸಾಹಸ ನೋಡಿದ್ರೆ ನಿಮ್ಮೆ ಹುಬ್ಬೇರುವುದಂತೂ ಖಂಡಿತ.

ವಿವರಣೆಗೆ ಬರುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಅಜ್ಜಿಯೊಬ್ಬರು ಹರಿದ್ವಾರದ ಹರ್​ ಕಿ ಪೌರಿಯಲ್ಲಿರುವ 40 ಅಡಿ ಎತ್ತರದ ಸೇತುವೆಯಿಂದ ಜಿಗಿದು ಕೆಳಗೆ ಹರಿಯುವ ಗಂಗಾ ನದಿಗೆ ಬೀಳುತ್ತಾರೆ. ಮೊದಲು ಕಬ್ಬಿಣದ ತಡೆಗೋಡೆಯೊಳಗೆ ನುಸುಳಿ ಸೇತುವೆಯ ಅಂಚಿನಲ್ಲಿ ನಿಂತುಕೊಳ್ಳುವ ಅಜ್ಜಿ ನೇರವಾಗಿ ಗಂಗಾ ನದಿಗೆ ಜಿಗಿಯುತ್ತಾರೆ. ವೇಗವಾಗಿ ನೀರು ಹರಿಯುತ್ತಿದ್ದರು ಆರಾಮಾಗಿ ಈಜುತ್ತಾ ನದಿ ತೀರಕ್ಕೆ ಹೋಗುತ್ತಾರೆ.

ಈ ವಿಡಿಯೋ ನೋಡಿದವರು ಅವಕ್ಕಾಗಿದ್ದಾರೆ. 30 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಅಜ್ಜಿಯ ಉತ್ಸಾಹಕ್ಕೆ ಫಿದಾ ಆಗಿದ್ದಾರೆ. ಈ ವಯಸ್ಸಿನಲ್ಲಿ ಈ ರೀತಿ ಮಾಡಬೇಕೆಂದರೆ ಒಂದು ಗುಂಡಿಗೆ ಸಾಲಲ್ಲ, ಈ ಅಜ್ಜಿಗೆ ಎರಡು ಗುಂಡಿಗೆ ಇರಬೇಕೆಂದು ಕೊಂಡಾಡಿದ್ದಾರೆ. ಇದೇ ಸಂದರ್ಭದಲ್ಲಿ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಸುರಕ್ಷತಾ ಸಾಧನ ಇಲ್ಲದೆ ಈ ರೀತಿಯ ಪ್ರಯತ್ನ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

ಅಂದಾಹಾಗೆ 73 ವರ್ಷದ ಅಜ್ಜಿಯ ಹೆಸರು ಓಂವತಿ. ತನ್ನ ಸಾಹಸದ ಬಗ್ಗೆ ಮಾತನಾಡಿರುವ ಅಜ್ಜಿ, ನನ್ನಂತೆ ಯಾರೂ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಾನು ಚಿಕ್ಕಂದಿನಿಂದಲೂ ನದಿಗಳಲ್ಲಿ ಈಜುತ್ತಿದ್ದ ಕಾರಣ ನನಗೆ ಯಾವುದೇ ಭಯವಾಗಲಿಲ್ಲ. ಆದರೆ, ಯಾರೂ ಕೂಡ ನನ್ನನ್ನು ಅನುಸರಿಸಬೇಡಿ ಎಂದಿದ್ದಾರೆ. ಬಾಲ್ಯದಲ್ಲಿ ನದಿ, ಕೊಳಗಳಲ್ಲಿ ಈಜಿದ ಫಲವನ್ನು ಈಗಲೂ ಪಡೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಓಂವತಿ ಅವರು ಹರಿಯಾಣದ ಬಂದೇಪುರ್​ ಗ್ರಾಮದವರು. ಈಜು ಮಾತ್ರವಲ್ಲ ನೃತ್ಯದಲ್ಲೂ ಅವರು ಎತ್ತಿದ ಕೈ. ನೃತ್ಯ ಮಾಡುತ್ತಿರುವ ಅವರ ಮತ್ತೊಂದು ವಿಡಿಯೋ ಸಹ ವೈರಲ್​ ಆಗಿದೆ. ಈ ವಯಸ್ಸಿನಲ್ಲಿ ಅವರ ನೃತ್ಯದ ಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ. (ಏಜೆನ್ಸೀಸ್​)