ಲಖನೌ: ಸಹಪಾಠಿಯೊಂದಿಗೆ ಜಗಳವಾಡಿದ್ದಕ್ಕೆ ಗದರಿದ ಶಿಕ್ಷಕನ ಮೇಲೆ 10ನೇ ತರಗತಿ ವಿದ್ಯಾರ್ಥಿಯೊಬ್ಬ ನಾಡ ಪಿಸ್ತೂಲಿನಿಂದ ಮೂರು ಬಾರಿ ಗುಂಡು ಹಾರಿಸಿದ್ದ ಪ್ರಕರಣ ಉತ್ತರ ಪ್ರದೇಶದ ಸೀತಾಪುರದಿಂದ ವರದಿಯಾಗಿದೆ.
ಶಿಕ್ಷಕನ ಮೇಲೆ ಮೂರು ಸುತ್ತು ಗುಂಡು ಹಾರಿಸಿದ ಆರೋಪಿ ವಿದ್ಯಾರ್ಥಿ, ಪಿಸ್ತೂಲಿನೊಂದಿಗೆ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಶಿಕ್ಷಕ ಅಪಾಯದಿಂದ ಪಾರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಲಖನೌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿ ಎಸಗಿದ ಇಡೀ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುಂಡು ಹಾರಿಸಿದ ಬಾಲಕನ ಮೇಲೆ ಎರಗಿದ ಸ್ಥಳೀಯರು ಆಯುಧವನ್ನು ಕಸಿದು ಕೊಳ್ಳಲು ಯತ್ನಿಸಿದರು. ವಿದ್ಯಾರ್ಥಿ ಪಿಸ್ತೂಲಿನ ಹಿಡಿಯಿಂದ ಶಿಕ್ಷಕನನ್ನು ಹೊಡೆದಿದ್ದೂ ಚಿತ್ರಿತವಾಗಿದೆ. ಬೈದಿದ್ದಕ್ಕೆ ಬಾಲಕ ಇಷ್ಟೊಂದು ಸಿಟ್ಟಾಗಿದ್ದ ಎನ್ನುವುದು ಗೊತ್ತೇ ಇರಲಿಲ್ಲ ಎಂದು ಶಿಕ್ಷಕ ಹೇಳಿದ್ದಾರೆ. (ಏಜೆನ್ಸೀಸ್)