ಬ್ಯಾಂಕಾಕ್: ಲೈಂಗಿಕ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಥಾಯ್ಲೆಂಡ್ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಲೈಂಗಿಕ ಅಪರಾಧಿಗಳಿಗೆ ಸ್ವಯಂ ಪ್ರೇರಿತ ಕೆಮಿಕಲ್ ಕ್ಯಾಸ್ಟ್ರೇಶನ್ (ಲೈಂಗಿಕ ಹಾರ್ಮೋನ್ ಉತ್ಪಾದನೆ ನಿಲ್ಲಿಸಲು ರಾಸಾಯನಿಕಗಳು ಅಥವಾ ಔಷಧಗಳ ಬಳಕೆ) ಮಾಡಲು ಸಮ್ಮತಿಸುವ ಮಸೂದೆಯನ್ನು ಥಾಯ್ಲೆಂಡ್ ಸೆನೆಟ್ ಅಥವಾ ಥಾಯ್ಲೆಂಡ್ ರಾಷ್ಟ್ರೀಯ ಪರಿಷತ್ ಮಂಗಳವಾರ ಅಂಗೀಕರಿಸಿರುವುದಾಗಿ ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ.
ಈ ಮಸೂದೆಯ ಅಡಿಯಲ್ಲಿ, ಮತ್ತೊಮ್ಮೆ ಲೈಂಗಿಕ ಅಪರಾಧ ಎಸಗುವ ಆತಂಕ ಹೊಂದಿರುವ ಕೆಲವು ಲೈಂಗಿಕ ಅಪರಾಧಿಗಳು ಬಯಸಿದ್ದಲ್ಲಿ, ತಮ್ಮ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವ ಚುಚ್ಚುಮದ್ದನ್ನು ಸ್ವೀಕರಿಸುವ ಆಯ್ಕೆಯನ್ನು ನೀಡಲಾಗಿದೆ. ಚುಚ್ಚುಮದ್ದು ಸ್ವೀಕರಿಸಿದರೆ ಅದಕ್ಕೆ ಪ್ರತಿಯಾಗಿ ಕಡಿಮೆ ಜೈಲು ಶಿಕ್ಷೆಯನ್ನು ನೀಡಲಾಗುತ್ತಿದೆ.
ಹಿಂಸಾಚಾರ ಸಂಬಂಧಿತ ಮರು ಅಪರಾಧ ತಡೆ ಮಸೂದೆಯನ್ನು ಥಾಯ್ಲೆಂಡ್ ಕಾನೂನು ಸಚಿವಾಲಯವು ಪ್ರಸ್ತಾಪಿಸಿದೆ ಮತ್ತು ಈಗಾಗಲೇ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅನುಮೋದನೆಯನ್ನು ಪಡೆದುಕೊಂಡಿದೆ. ಶೀಘ್ರದಲ್ಲೇ ಕಾನೂನು ಜಾರಿಯಾಗಲಿದೆ ಎಂದು ಬ್ಯಾಂಕಾಕ್ ಪೊಸ್ಟ್ ತಿಳಿಸಿದೆ.
ಅಂದಹಾಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಈಗಾಗಲೇ ಹಲವು ದೇಶಗಳಲ್ಲಿ ಜಾರಿಯಲ್ಲಿವೆ. ದಕ್ಷಿಣ ಕೊರಿಯಾ, ಪಾಕಿಸ್ತಾನ, ಪೋಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ನ 8 ರಾಜ್ಯಗಳು ಕೆಮಿಕಲ್ ಕ್ಯಾಸ್ಟ್ರೇಶನ್ ಅಳವಡಿಸಿಕೊಂಡಿವೆ. ನಾರ್ವೆ, ಡೆನ್ಮಾರ್ಕ್ ಮತ್ತು ಜರ್ಮನಿಯಲ್ಲಿ ಗಂಭೀರವಾರ ಲೈಂಗಿಕ ಅಪರಾಧಗಳಿಗೆ ಸರ್ಜಿಕಲ್ ಕೆಮಿಕಲ್ ಕ್ಯಾಸ್ಟ್ರೇಶನ್ ಮಾಡಲಾಗುತ್ತದೆ. (ಏಜೆನ್ಸೀಸ್)