ನ್ಯೂಸ್

ಇತ್ತೀಚೆಗಷ್ಟೇ MBBS​ ಮುಗಿಸಿದ್ದ ಮಾಜಿ ಶಾಸಕರ ಪುತ್ರಿ ನೇಣಿಗೆ ಶರಣು

ಹೈದರಾಬಾದ್​: ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಪಕ್ಷದ ಮಾಜಿ ಶಾಸಕರ ಮಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭದ್ರಾದ್ರಿ ಕೋಟಗುಡೆಮ್​ ಜಿಲ್ಲೆಯಲ್ಲಿ ನಡೆದಿದೆ.

ತಾತಿ ಮಹಾಲಕ್ಷ್ಮೀ ಮೃತ ದುರ್ದೈವಿ. ಈಕೆ ಅಶ್ವರಾವ್‌ಪೇಟೆಯ ಮಾಜಿ ಶಾಸಕ ತಾತಿ ವೆಂಕಟೇಶ್ವರ್​ ಅವರ ಪುತ್ರಿ. ಭದ್ರಾದ್ರಿ ಜಿಲ್ಲೆಯ ಸರಪಾಕಾ ಪಟ್ಟಣದ ತಮ್ಮ ಮನೆಯಲ್ಲಿ ಬುಧವಾರ ನೇಣಿಗೆ ಶರಣಾಗಿದ್ದಾರೆ. ಮಹಾಲಕ್ಷ್ಮೀ ಇತ್ತೀಚೆಗಷ್ಟೇ ಎಂಬಿಬಿಎಸ್​ ಮುಗಿಸಿ, ಸ್ನಾತಕೋತ್ತರ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಆದರೆ, ಇದೀಗ ನೇಣಿಗೆ ಶರಣಾಗಿದ್ದು, ತಮ್ಮ ಬದುಕಿಗೆ ದುರಂತ ಅಂತ್ಯ ಹಾಡಿದ್ದಾರೆ.

ನಿನ್ನೆ ಕುಟುಂಬದ ಸದಸ್ಯರು ಕೋಣೆಯ ಬಾಗಿಲು ಬಡಿದು ಹೊರಗೆ ಬರುವಂತೆ ಮಹಾಲಕ್ಷ್ಮೀಯನ್ನು ಕೇಳಿದ್ದಾರೆ. ಆದರೆ, ತುಂಬಾ ಹೊತ್ತಾದರೂ ಆಕೆ ಬರದಿದ್ದಾಗ ಅನುಮಾನಗೊಂಡು ಬಾಗಿಲನ್ನು ಮುರಿದಾಗ ಆಕೆಯ ದೇಹ ಹಗ್ಗದಲ್ಲಿ ನೇತಾಡುವುದನ್ನು ನೋಡಿ ಕುಟುಂಬಸ್ಥರು ಶಾಕ್​ ಆಗಿದ್ದಾರೆ. ತಕ್ಷಣ ಆಕೆಯನ್ನು ಭದ್ರಾಚಲಂ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಅಷ್ಟರಲ್ಲಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿರುವುದಾಗಿ ವೈದ್ಯರು ಖಚಿತಪಡಿಸಿದರು. ಇದಾದ ಬಳಿಕ ಮಹಾಲಕ್ಷ್ಮೀ ಮೃತದೇಹವನ್ನು ಸರ್ಕಾರ ಆಸ್ಪತ್ರೆಗೆ ಮರಣೋತ್ತರಮ ಪರೀಕ್ಷೆಗಾಗಿ ರವಾನಿಸಲಾಯಿತು.

ಮಹಾಲಕ್ಷ್ಮೀ ಸಾವಿನ ಸುದ್ದಿ ತಿಳಿದು ಮಾಜಿ ಶಾಸಕ ತಾತಿ ವೆಂಕಟೇಶ್ವರ್​ ಆಸ್ಪತ್ರೆಗೆ ದೌಡಾಯಿತಿ ಮಗಳ ಮೃತದೇಹ ನೋಡಿ ಆಘಾತಕ್ಕೆ ಒಳಗಾದರು. ಅಲ್ಲದೆ, ಟಿಆರ್​ಎಸ್​ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಮಾಜಿ ಶಾಸಕ ವೆಂಕಟೇಶ್ವರ ಮನೆ ಬಳಿ ತೆರಳಿ ಸಂತಾಪ ಸೂಚಿಸಿದ್ದಾರೆ. ಮಹಾಲಕ್ಷ್ಮಿ ಸಾವಿನೊಂದಿಗೆ ವೆಂಕಟೇಶ್ವರ ಅವರ ಮನೆಯಲ್ಲಿ ದುರಂತದ ಛಾಯೆ ಆವರಿಸಿದೆ. ಆತ್ಮಹತ್ಯೆಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ. (ಏಜೆನ್ಸೀಸ್​)