More

    ಬಿಡುಗಡೆಯ ಬೆನ್ನಲ್ಲೇ ಕೆಜಿಎಫ್​ 2ಗೆ ಪೈರಸಿ ಶಾಕ್​: ಕೆಲ ವೆಬ್​ಸೈಟ್​ನಲ್ಲಿ ಇಡೀ ಚಿತ್ರ ಲೀಕ್​!

    ಬೆಂಗಳೂರು​: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್​ 2 ಸಿನಿಮಾಗೆ ಬಿಡುಗಡೆಯ ಬೆನ್ನಲ್ಲೇ ಪೈರಸಿ ಕಾಟ ಎದುರಾಗಿದೆ. ಚಿತ್ರದ ಪೈರಸಿ ಕಾಪಿಯು ಕೆಲ ವೆಬ್​ಸೈಟ್​ಗಳಲ್ಲಿ ಹರಿದಾಡುತ್ತಿದೆ.

    ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಸಿನಿಮಾ ರಂಗದಲ್ಲಿ ಪೈರಸಿ ವಿಚಾರಕ್ಕೆ ಬಹಳ ಸೂಕ್ತವಾಗಿದೆ. ಕೋಟಿಗಟ್ಟಲೆ ಹಣ ವ್ಯಯಿಸಿ, ತಿಂಗಳುಗಟ್ಟಲೇ ದೇಶ-ವಿದೇಶ ಅಲೆದು ನಿರ್ಮಾಪಕರು ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ. ಆದರೆ, ಕೆಲ ಕಿಡಿಗೇಡಿಗಳು ಕೇವಲ ಒಂದೇ ದಿನದಲ್ಲಿ ಚಿತ್ರವನ್ನು ರೆಕಾರ್ಡ್​ ಮಾಡಿ ಅದರ ಲಿಂಕ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ನಿರ್ಮಾಪಕರ ಜೇಬಿಗೆ ಕತ್ತರಿ ಹಾಕಿಬಿಡುತ್ತಾರೆ.

    ಕೋಟ್ಯಂತರ ರೂಪಾಯಿ ಖರ್ಚು ಮಾಡುವ ನಿರ್ಮಾಪಕ ಪೈರಸಿ ಎಂಬ ಪೆಡಂಭೂತದಿಂದ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುತ್ತಾರೆ. ಹೀಗಾಗಿ ಇದಕ್ಕೆ ಒಂದು ಕಠಿಣವಾದ ಕ್ರಮ ಜರುಗಲೇಬೇಕಿದೆ. ಇಲ್ಲವಾದಲ್ಲಿ ನಿರ್ಮಾಪಕ ಬಾಳು ಕತ್ತಲಲ್ಲಿ ಮುಳುಗುವುದರಲ್ಲಿ ನಿಶ್ಚಯವಿಲ್ಲ. ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಪೈರಸಿ ಮಾಫಿಯಾ ಠಕ್ಕರ್ ಕೊಡಲು ಆರಂಭಿಸಿವೆ. ಸಿನಿಮಾ ಬಿಡುಗಡೆಯಾದ ಮೂರೇ ದಿನಕ್ಕೆ ಹೊಸ ಚಿತ್ರಗಳು ಪೈರಸಿಗೆ ತುತ್ತಾಗುತ್ತಿವೆ. ಕಿಡಿಗೇಡಿಗಳು ಕೃತ್ಯಕ್ಕೆ ಟೆಲಿಗ್ರಾಂ ತಾಣ ದೊಡ್ಡ ವೇದಿಕೆ ಆಗಿದೆ. ಹೊಸ ಚಿತ್ರದ ಸಾಕಷ್ಟು ಲಿಂಕ್​ಗಳು ಟೆಲಿಗ್ರಾಂನಲ್ಲಿ ಲಭ್ಯವಾಗುತ್ತಿವೆ. ಇದನ್ನು ಚಿತ್ರರಂಗ ಗಂಭೀರವಾಗಿ ಪರಿಗಣಿಸಬೇಕಾಗಿದೆ.

    ಪೈರಸಿ ಕಾಟ ಇದೀಗ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​​ 2ಗೂ ತಟ್ಟಿದೆ. ಕಳೆದ ಮೂರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಇಂದು ನಸುಕಿನ ಜಾವದಿಂದಲೇ ದೇಶಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಿದೆ. ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದ್ದು, ಯಶ್​ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದೆ.

    ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ನಸುಕಿನ ಜಾವವೇ ಶೋಗಳು ಆರಂಭವಾಗಿದ್ದು, ರಾಕಿ ಭಾಯ್​ ಅದ್ಧೂರಿ ಎಂಟ್ರಿಯನ್ನು ಕಣ್ತುಂಬಿಕೊಂಡಿದ್ದಾರೆ. ಬೀದರ್​ನಿಂದ ಹಿಡಿದು ಗಡಿ ಜಿಲ್ಲಿ ಚಾಮರಾಜನಗರದವರೆಗೆ ಕೆಜಿಎಫ್​ ಹವಾ ಭಾರೀ ಜೋರಾಗಿದ್ದು, ನಟ ಯಶ್​ಗೆ ಜೈಕಾರ ಮೊಳಗಿದೆ. ಚಿತ್ರಮಂದಿರಗಳ ಮುಂದೆ ಪಟಾಕಿ, ಮದ್ದುಗುಂಡುಗಳ ಶಬ್ಧ ಜೋರಾಗಿದೆ.

    ಪೈರಸಿ ಶಾಕ್​
    ಇದೀಗ ಮೊದಲ ದಿನವೇ ಚಿತ್ರದ ಪೈರಸಿ ಕಾಪಿ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ. ಕೆಲ ಪ್ರಖ್ಯಾತವಲ್ಲದ ಪೈರಸಿ ಆಧಾರಿತ ವೆಬ್​ಸೈಟ್​ಗಳಲ್ಲಿ ಕೆಜಿಎಫ್​ 2 ಕಾಪಿ ಸೋರಿಕೆಯಾಗಿದೆ. ಇದರಿಂದ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಸನ್​ಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಹೀಗಾಗಿ ಅಭಿಮಾನಿಗಳು ಪೈರಸಿ ಕಾಪಿ ನೋಡದಂತೆ ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ನಿನ್ನೆಯಷ್ಟೇ ನಿರ್ದೇಶಕರು ಪೈರಸಿ ವಿರುದ್ಧದ ಹೋರಾಟಕ್ಕೆ ಕರೆ ನೀಡಿದ್ದಾರೆ. ‘ಕೆಜಿಎಫ್ ನಿಮಗೆ ನೀಡುವ ಸಲುವಾಗಿ ಎಂಟು ವರ್ಷಗಳ ಕಾಲ ರಕ್ತ, ಬೆವರು, ಕಣ್ಣೀರು ಹರಿಸಲಾಗಿದೆ. ನಿಮ್ಮೆಲ್ಲರಲ್ಲಿ ನಮ್ಮ ಕೋರಿಕೆ ಏನೆಂದರೆ ದಯವಿಟ್ಟು ನೀವ್ಯಾರೂ ಚಿತ್ರಮಂದಿರಗಳಲ್ಲಿ ಕೆಜಿಎಫ್​ ಚಾಪ್ಟರ್ 2 ಚಿತ್ರದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡು ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡಬೇಡಿ. ನಾವೆಲ್ಲ ಕೆಜಿಎಫ್‌ನ ಅಬ್ಬರವನ್ನು ಚಿತ್ರಮಂದಿರದಲ್ಲೇ ನೋಡೋಣ. ಥಿಯೇಟರ್‌ನಲ್ಲೇ ನೋಡಲು ಕಾಯುತ್ತಿರುವವರಿಗೆ ಅದನ್ನು ಹಾಳುಗೆಡುವುದು ಬೇಡ‌’ ಎಂಬುದಾಗಿ ನಿರ್ದೇಶಕ ಪ್ರಶಾಂತ್ ನೀಲ್ ಮನವಿ ಮಾಡಿಕೊಂಡಿದ್ದಾರೆ.

    ಅಷ್ಟಕ್ಕೂ ಅವರಿಗಿರುವ ಆತಂಕವೆಂದರೆ ಪೈರಸಿಯದ್ದು. ಪೈರಸಿಗೆ ಅವಕಾಶ ಕೊಡುವುದು ಬೇಡ ಎನ್ನುವ ಕಾಳಜಿ ವ್ಯಕ್ತಪಡಿಸಿರುವ ಅವರು, ಪೈರಸಿ ವಿರುದ್ಧದ ಹೋರಾಟ ನಿಮ್ಮಿಂದಲೇ ಶುರುವಾಗುವಂಥದ್ದು. ದಯವಿಟ್ಟು ಸಿನಿಮಾದ ದೃಶ್ಯ ಹಾಗೂ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

    ಅಲ್ಲದೆ ಪೈರಸಿ ಆಗದಂತೆ ಎಚ್ಚರಿಕೆ ವಹಿಸಿರುವ ಅವರು ಆ್ಯಂಟಿ ಪೈರಸಿ ಕಂಟ್ರೋಲ್ ರೂಮ್ ನಂಬರ್ ಕೂಡ ಹಂಚಿಕೊಂಡಿದ್ದಾರೆ. ಪೈರಸಿ ಪ್ರಯತ್ನ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ ಆ್ಯಂಟಿ ಪೈರಸಿ ಕಂಟ್ರೋಲ್ ರೂಮ್​ಗೆ ತಿಳಿಸಿ ಎಂದು ಇ-ಮೇಲ್ ಐಡಿ, ವಾಟ್ಸ್​ಆ್ಯಪ್​ ನಂಬರ್​ಗಳು ಮತ್ತು ಟ್ವಿಟರ್ ಹ್ಯಾಂಡಲ್​ ಮಾಹಿತಿ ಕೂಡ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

    ಬಿಡುಗಡೆಗೂ ಮುನ್ನ ಹೋರಾಟಕ್ಕೆ ಕರೆ ಕೊಟ್ಟ ಕೆಜಿಎಫ್​-2 ನಿರ್ದೇಶಕ; ಏನದು ವಿಷಯ?

    ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯದಲ್ಲಿ ಬೆಂಗಾಲ್​ ಮಾನಿಟರ್​ ಉಡದ ಮೇಲೆ ಗ್ಯಾಂಗ್​ರೇಪ್​: ನಾಲ್ವರ ಬಂಧನ

    ನೋಡ ನೋಡುತ್ತಿದ್ದಂತೆ ಕಾಂಕ್ರಿಟ್​ ಚಪ್ಪಡಿ ಕುಸಿದು ಚರಂಡಿ ಒಳಗೆ ಬಿದ್ದ ಐವರು: ಭಯಾನಕ ದೃಶ್ಯ ಸೆರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts